ಚಿತ್ರದುರ್ಗ : ರಾಜ್ಯದಲ್ಲಿ ಜನಸಾಮಾನ್ಯರಿಗೆ ಮಾಸ್ಕ್ ಧರಿಸುವಂತೆ ಹಾಗೂ ಸಾಮಾಜಿಕ ಅಂತರ ಕಾಪಾಡುವಂತೆ ಜಾಗೃತಿ ಮೂಡಿಸುವುದು ಆರೋಗ್ಯ ಸಚಿವರ ಜವಾಬ್ದಾರಿ. ಆದರೆ, ಆರೋಗ್ಯ ಸಚಿವರೇ ಆಡಂಬರದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸ್ವತಃ ತಾವೇ ಮಾಸ್ಕ್ ಧರಿಸದೇ ನಿಯಮ ಉಲ್ಲಂಘನೆ ಮಾಡಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪರಶುರಾಮಪುರದಲ್ಲಿ ಆರೋಗ್ಯ ಸಚಿವ ಬಿ ಶ್ರೀರಾಮುಲು ಆಡಂಬರದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.
ಪರುಶುರಾಮಪುರದ ಬಳಿ ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಿರುವ ಬ್ಯಾರೇಜ್ ತುಂಬಿದ್ದರಿಂದ ಬಾಗಿನ ಅರ್ಪಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೊದಲು, ಸಚಿವರಿಗೆ ಸಾವಿರಾರು ಕಾರ್ಯಕರ್ತರು ಸೇಬಿನ ಹಾರ ಹಾಗೂ ಜೆಸಿಬಿ ಮೇಲಿಂದ ಹೂವು ಎರಚಿದರು. ಮಾಸ್ಕ್ ಹಾಕದೆ ಸಾಮಾಜಿಕ ಅಂತರ ಕಾಪಾಡದೆ ಕಾರ್ಯಕ್ರಮದಲ್ಲಿ ಭಾಗಿಯಾದ್ರು. ಆಡಂಬರದ ಕಾರ್ಯಕ್ರಮ ಬೇಡ ಎನ್ನುವ ಬದಲು ಸಚಿವ ಶ್ರೀರಾಮುಲು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿರುವ ದೃಶ್ಯ ಕಣ್ಣಿಗೆ ರಾಚುತ್ತಿದ್ದವು.