ಚಿತ್ರದುರ್ಗ: ಎರಡನೇ ಹಂತದ ಲಸಿಕೆ ನೀಡಿಕೆಗೆ ಜಿಲ್ಲಾಸ್ಪತ್ರೆಯಲ್ಲಿ ಇಂದು ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಚಾಲನೆ ನೀಡಿದರು.
ಜಿಲ್ಲಾಸ್ಪತ್ರೆಯಲ್ಲಿ ಎರಡನೇ ಹಂತದ ವ್ಯಾಕ್ಸಿನ್ ನೀಡಲು ಚಾಲನೆ ನೀಡಲಾಗಿದ್ದು, 65 ವರ್ಷದ ತಿಮ್ಮಾ ರೆಡ್ಡಿ ಎಂಬುವರಿಗೆ ಆರಂಭದಲ್ಲಿ ವ್ಯಾಕ್ಸಿನ್ ನೀಡಲಾಯಿತು.
ಪ್ರಥಮ ದಿನವಾದ ಇಂದು ಜಿಲ್ಲೆಯಲ್ಲಿ 1600 ಜನರಿಗೆ ಲಸಿಕೆ ನೀಡಲಾಗುತ್ತಿದೆ. ಆಫ್ ಲೈನ್ ಹಾಗೂ ಆನ್‌ಲೈನ್ ನೋಂದಣಿ ಮೂಲಕ ಜನರಿಗೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುತ್ತಿದೆ.
ಒಟ್ಟು 08 ಕೇಂದ್ರಗಳಲ್ಲಿ ಇಂದು ವ್ಯಾಕ್ಸಿನ್ ನೀಡಲಾಗುತ್ತಿದೆ. ಈ ಪೈಕಿ 6 ಸರ್ಕಾರಿ ಆಸ್ಪತ್ರೆಗಳು ಉಚಿತ ಲಸಿಕೆ ನೀಡಿದರೆ ಹಾಗೂ 02 ಖಾಸಗಿ ಆಸ್ಪತ್ರೆಗಳಲ್ಲಿ 250 ರೂ. ಹಣ ಪಡೆದು ಲಸಿಕೆ ನೀಡಲಾಗುತ್ತಿದೆ.
ಇಂದು ಪ್ರಥಮ ಆದ್ಯತೆ 45 ರಿಂದ 59 ವರ್ಷದೊಳಗಿನ ಕಿಡ್ನಿ ಸಂಬಂಧಿತ ಕಾಯಿಲೆಗಳಿರುವ ಜನರಿಗೆ ಲಸಿಕೆ ನೀಡಲಾಗುತ್ತಿದೆ. ಜಿಲ್ಲಾ ಆರೋಗ್ಯಾಧಿಕಾರಿಗಳ ಕಛೇರಿಯಲ್ಲಿ 11 ಸಾವಿರ ಲಸಿಕಾ ಡೋಸ್‍ಗಳು ಉಗ್ರಾಣದಲ್ಲಿದ್ದು, ಸದ್ಯಕ್ಕೆ ಜಿಲ್ಲೆಯಲ್ಲಿ ವ್ಯಾಕ್ಸಿನ್‌ಗೆ ಕೊರತೆಯಿಲ್ಲ ಎಂದು ಡಿಎಚ್ಒ ಡಾ. ಪಾಲಾಕ್ಷ ಮಾಹಿತಿ ನೀಡಿದ್ದಾರೆ.
ತಾಂತ್ರಿಕ ದೋಷದಿಂದ ಲಸಿಕೆ ಪಡೆಯಲು ಬಂದ ಹಿರಿಯ ಜೀವಿಗಳು ಕೆಲಕಾಲ ಕಾದು ಕುಳಿತ ಘಟನೆಯು ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ.
ಆನ್ಲೈನ್ ನೋಂದಣಿಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಪರದಾಟ ನಡೆಸುವಂತಾಯಿತು. ಇನ್ನು ಲಸಿಕೆ ಪಡೆಯಲು ಆಗಮಿಸಿ ಎರಡು ಗಂಟೆಗಳು ಕಳೆದರೂ ಲಸಿಕೆ ನೀಡದಿರುವುದಕ್ಕೆ ಕೆಲವು ಜನರು ಜಿಲ್ಲಾಡಳಿತದ ವಿರುದ್ಧ ಸಿಡಿಮಿಡಿಗೊಂಡರು.
ಇನ್ನು ಲಸಿಕೆ ಪಡೆಯಲು ಬಂದವರು ಸಿಡಿಮಿಡಿಗೊಳ್ಳುತ್ತಿದ್ದಂತೆ ಜಿಲ್ಲಾಸ್ಪತ್ರೆಯ ಸಿಬ್ಬಂದಿಗಳು ಆಫ್‌ಲೈನ್ ಮೂಲಕ ಲಸಿಕೆ ನೀಡಲು ಆರಂಭಿಸಿದರು.