ಚಿತ್ರದುರ್ಗ: ಜಿಲ್ಲೆಯ ಹಿಂದೂ ಮಹಾಗಣಪತಿ ನಿಮಜ್ಜನ ಕಾರ್ಯಕ್ರಮದ ಮೇಲೆ ಉಗ್ರರ ಕಣ್ಣು ಬಿದ್ದಿದೆ ಎಂಬ ವದಂತಿ ಸುಳ್ಳು ಎಂದು ಸಾಬೀತಾಗಿದೆ. ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ರವರು ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.
ನಿಮಜ್ಜನ ಕಾರ್ಯಕ್ರಮದ ಮೇಲೆ ಉಗ್ರರ ಕಣ್ಣು ಬಿದ್ದಿದೆ ಎಂಬ ವದಂತಿಗೆ ಪ್ರತಿಕ್ರಿಯಿಸಿದ ಎಸ್ಪಿ ಅರುಣ್, ಇದು ಸುಳ್ಳು ವದಂತಿ. ಯಾರೂ ಕಿವಿಗೊಡಬಾರದು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಇದೇ ತಿಂಗಳು 21 ನಿಮಜ್ಜನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಎರಡು ಲಕ್ಷ ಸೇರುವ ಸಾಧ್ಯತೆ ಇದೆ. ಯಾವುದೇ ಉಗ್ರರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ ಎಂದು ಮಾಹಿತಿ ನೀಡಿದರು.
ಈ ಬಾರಿ ನಡೆಯುವ ಶೋಭಾಯಾತ್ರೆಗೆ ಬಿಗಿ ಪೊಲೀಸ್ ಬಂದೋಬಸ್ತ್ಗೆ ತಯಾರಿ ಕೂಡ ನಡೆಸಲಾಗಿದೆ. ಭಯೋತ್ಪಾದಕರ ಕರಿ ನೆರಳು ಚಿತ್ರದುರ್ಗದ ಗಣೇಶನ ಮೇಲೆ ಬಿದ್ದಿದೆ ಎಂಬ ವದಂತಿ ಹಬ್ಬಿಸಲಾಗಿದೆ. ಇದರ ಬಗ್ಗೆ ಕೆಲ ಮಾಧ್ಯಮಗಳು ಕೂಡ ವರದಿ ಬಿತ್ತರಿಸಿರುವುದು ಸಮಂಜಸವಲ್ಲ. ಉಗ್ರರ ಬಗ್ಗೆ ನಮಗೆ ಯಾವುದೇ ಮಾಹಿತಿ ಕೂಡ ದೊರೆತಿಲ್ಲ ಎಂದು ಹಬ್ಬಿದ ವದಂತಿಗೆ ತೆರೆ ಎಳೆದರು. ಶೋಭಾಯಾತ್ರೆಗೆ ಪ್ರತಿ ವರ್ಷದಂತೆ ಆ್ಯಂಟಿ ಸುಬೋಟೊ ಟೀಂ, 1750 ಪೊಲೀಸ್ ಅಧಿಕಾರಿಗಳು, 15 ಕೆಎಸ್ಆರ್ಪಿ,15 ಡಿಎಆರ್, 01 ಎಆರ್ಎಫ್ ಫೋರ್ಸ್ಅನ್ನು ಮುಂಜಾಗ್ರತಾ ಕ್ರಮವಾಗಿ ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದ್ರು. ಇನ್ನು ಹಿಂದು ಮಹಾಗಣಪತಿ ಪ್ರತಿಷ್ಠಾಪನೆ ವೇಳೆ ಭಾಗಿಯಾಗಿದ್ದ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ಹಿಂದೂ-ಮುಸ್ಲಿಂರು ಸೇರಿದಂತೆ ಈ ಹಬ್ಬವನ್ನು ಇತರೆ ಧರ್ಮದವರು ಕೂಡ ಆಚರಣೆ ಮಾಡ್ತಾರೆ. ಸುಳ್ಳು ವದಂತಿ ಹರಡಬೇಡಿ ಎಂದು ಮನವಿ ಮಾಡಿಕೊಂಡರು.