ಚಿತ್ರದುರ್ಗ: ಕೆಲ ದಿನಗಳ ಹಿಂದೆ ಚಿತ್ರದುರ್ಗ ಜಿಲ್ಲೆಯ ಗ್ರಾಮವೊಂದರ ಹೊಲದಲ್ಲಿ ಚಿನ್ನದ ನಾಣ್ಯಗಳು ಪತ್ತೆಯಾಗಿರುವ ಬಗ್ಗೆ ವರದಿಯಾಗಿತ್ತು. ಈ ಪ್ರಕರಣ ಕುರಿತಂತೆ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಹೌದು, ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಕೆಳಗಳಹಟ್ಟಿ ಗ್ರಾಮದಲ್ಲಿ ಚಿನ್ನದ ನಾಣ್ಯಗಳು ಪತ್ತೆಯಾಗಿದ್ದವು. ಇದು ಅಸಲಿವೋ ಅಥವಾ ನಕಲಿಯೋ ಎಂಬುದು ಮೊದಲು ತಿಳಿದಿರಲಿಲ್ಲ. ಈಗ ನಾಣ್ಯಗಳ ಅಸಲಿಯತ್ತಿನ ಬಗ್ಗೆ ಪೊಲೀಸರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.
ಈಟಿವಿ ಭಾರತ್ ಜೊತೆ ದೂರವಾಣಿ ಕರೆ ಮೂಲಕ ಮಾಹಿತಿ ನೀಡಿದ ಮೊಳಕಾಲ್ಮೂರು ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಪಾಡುರಂಗಪ್ಪ, ‘ಕೆಳಗಳಹಟ್ಟಿ ಗ್ರಾಮದಲ್ಲಿ ಜನರಿಗೆ ದೊರಕಿರುವ ನಾಣ್ಯಗಳು ಚಿನ್ನದ್ದಲ್ಲ. ಅವುಗಳು ನಕಲಿ ನಾಣ್ಯಗಳು. ಜಿಲ್ಲೆಯಲ್ಲಿ ನಕಲಿ ಚಿನ್ನಗಳನ್ನು ನೀಡಿ ವಂಚಿಸುತ್ತಿದ್ದ ಗ್ಯಾಂಗ್ ಹೆಚ್ಚಾಗಿದೆ. ಕೆಲ ಆರೋಪಿಗಳು ಆ ಪ್ರದೇಶದಲ್ಲಿ ನಕಲಿ ಚಿನ್ನದ ನಾಣ್ಯಗಳು ಎಸೆದು ಹೋಗಿರುವ ಶಂಕೆ ಇದೆ. ಈ ನಾಣ್ಯಗಳು ಜನರ ಕೈಗೆ ಸಿಕ್ಕಿದ್ದು, ನಗರದ್ಯಾದಂತ ನಾಣ್ಯಗಳು ಸಿಕ್ತಿವೆ ಎಂದು ವಂದತಿ ಹಬ್ಬಿದೆ. ಹೀಗಾಗಿ ಜನ ತಂಡೋಪ ತಂಡವಾಗಿ ಬಂದು ಇಲ್ಲಿ ಹುಡುಕಾಟ ನಡೆಸಿದ್ದಾಗ ಅವರಿಗೆ ಕೆಲವೊಂದು ಚಿನ್ನದ ನಾಣ್ಯಗಳು ದೊರೆತ್ತಿವೆ ಎಂದರು.
ಈ ಬಗ್ಗೆ ನಮಗೂ ಮಾಹಿತಿ ದೊರೆಯಿತು. ಕೂಡಲೇ ನಾವು ಕೂಡ ಘಟನ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾಗ ಇದು ನಕಲಿ ಚಿನ್ನವೆಂದು ತಿಳಿದುಬಂದಿತು. 6 ತಿಂಗಳ ಹಿಂದೆ ಇತಂಹದೆ ಘಟನೆ ಮೊಳಕಾಲ್ಮೂರು ತಾಲೂಕಿನ ಭೈರಪುರ ಗ್ರಾಮದಲ್ಲಿ ನಡೆದಿತ್ತು. ಹೀಗಾಗಿ ಆ ಜಾಲದವರೇ ಇದನ್ನು ಎಸೆದಿರುವುದರ ಶಂಕೆ ಇದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿದರು.
ಇನ್ನು ಕೆಳಗಳಹಟ್ಟಿ ಬಳಿ ಚಿನ್ನದ ನಾಣ್ಯ ಸಿಗುತ್ತವೆ ಎಂಬ ವದಂತಿ ಹಬ್ಬಿದ ಬೆನ್ನಲ್ಲೆ ರಾಷ್ಟ್ರೀಯ ಹೆದ್ದಾರಿ ಬಳಿ ಸೋಮವಾರ ಬೆಳಗ್ಗೆ ನೂರಾರು ಜನ ಜಮಾಯಿಸಿ ಶೋಧ ಕಾರ್ಯದಲ್ಲಿ ತೊಡಗಿದ್ದರು. ನಾಣ್ಯ ಸಂಗ್ರಹಿಸಿದ ಕೆಲವರಿಗೆ ವಿಕ್ಟೋರಿಯ ರಾಣಿಯ ಚಿತ್ರವಿರುವ ನಾಣ್ಯಗಳು ದೊರಕಿದ್ದವು. ಒಟ್ಟಾರೆ ನಿನ್ನೆ ಕೆಳಗಳಹಟ್ಟಿ ಗ್ರಾಮದಲ್ಲಿ ಜನ ಮರಳೋ ಜಾತ್ರೆ ಮರಳೋ ಎಂಬ ಸ್ಥಿತಿ ನಿರ್ಮಾಣವಾಗಿತ್ತು. ಸದ್ಯ ಪೊಲೀಸರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಜನರಿಗೆ ಸಿಕ್ಕ ನಾಣ್ಯ ನಕಲಿಯೆಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ವರ್ಷಾಂತ್ಯಕ್ಕೆ ಸಾಲು ಸಾಲು ರಜೆ: ಗೋವಾ ಬಿಟ್ಟು ಕಡಲನಗರಿಯತ್ತ ಮುಖ ಮಾಡಿದ ಪ್ರವಾಸಿಗರು
ಹಿಂದಿನ ನಕಲಿ ಚಿನ್ನದ ನಾಣ್ಯ ಪ್ರಕರಣ: ಮನೆ ನಿರ್ಮಾಣಕ್ಕೆ ಅಡಿಪಾಯ ತೆಗೆಯುವ ವೇಳೆ ಚಿನ್ನದ ನಾಣ್ಯಗಳು ಸಿಕ್ಕಿವೆ ಎಂದು ಗುತ್ತಿಗೆದಾರನಿಗೆ ವಂಚಕರು 60 ಲಕ್ಷ ರೂ. ವಂಚನೆ ಮಾಡಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ನಡೆದಿತ್ತು. ಗುತ್ತಿಗೆದಾರ ಅಸಲಿ ಚಿನ್ನವೆಂದು ಪಡೆದು ಚಿನ್ನದ ಅಂಗಡಿಯಲ್ಲಿ ಪರಿಶೀಲನೆ ಮಾಡಿದಾಗ ನಕಲಿ ಎಂದು ಬೆಳಕಿಗೆ ಬಂದಿತ್ತು.