ಚಿತ್ರದುರ್ಗ: ಪೊಲೀಸ್ ಪ್ರಶಿಕ್ಷಣಾರ್ಥಿಯೊಬ್ಬ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಜಿಲ್ಲೆಯ ತರಬೇತಿ ಕೇಂದ್ರದಲ್ಲಿ ನಡೆದಿದೆ.
ಶರಣಪ್ಪ ಸಣ್ಣಗೌಡ (27) ಮೃತ ಪ್ರಶಿಕ್ಷಣಾರ್ಥಿ ಬೆಂಗಳೂರು ನಗರದಲ್ಲಿ ಹೊಸದಾಗಿ ನೇಮಕಾತಿ ಹೊಂದಿದ್ದ. 431 ಪೋಲಿಸ್ ಪ್ರಶಿಕ್ಷಣಾರ್ಥಿಗಳು ಜಿಲ್ಲೆಯ ಹಿರಿಯೂರು ತಾಲೂಕಿನ ಐಮಂಗಲ ಪೊಲೀಸ್ ತರಬೇತಿ ಕೇಂದ್ರದಲ್ಲಿ ಕಳೆದ ನಾಲ್ಕು ತಿಂಗಳಿಂದ ತರಬೇತಿ ಪಡೆಯುತ್ತಿದ್ದರು. ಮೃತ ಶರಣಪ್ಪ ಸಣ್ಣ ಗೌಡ ಮೂಲತಃ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮದ್ದೂರು ಗ್ರಾಮದವರು.
ಶನಿವಾರ ಸಂಜೆ 7:30 ರ ಸಮಯದಲ್ಲಿ ತನ್ನ ಕೊಠಡಿಯಲ್ಲಿ ಫೋನ್ನಲ್ಲಿ ಮಾತನಾಡುತ್ತಿರುವಾಗ ಆಕಸ್ಮಿಕವಾಗಿ ಕುಸಿದು ಬಿದ್ದು ಅಸ್ವಸ್ಥರಾಗಿದ್ದು, ತಕ್ಷಣ ಅವರನ್ನು ಚಿತ್ರದುರ್ಗ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಐಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.