ಚಿತ್ರದುರ್ಗ: ರಾಂಪುರ ಕೋವಿಡ್ ಕೇರ್ ಸೆಂಟರ್ನಿಂದ ಸೋಂಕಿತ ಪೋಲಿಸ್ ಕಾನ್ಸ್ಟೇಬಲ್ ಒಬ್ಬ ನಾಪತ್ತೆಯಾಗಿ ಬಳಿಕ ಮತ್ತೆ ವಾಪಾಸ್ ಆಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಂಪುರ ಗ್ರಾಮದಲ್ಲಿ ನಡೆದಿದೆ.
ಜುಲೈ 27 ರಂದು ಕೋವಿಡ್ ಕೇರ್ ಸೆಂಟರ್ಗೆ ದಾಖಲಾಗಿದ್ದ ಇವರು ನಿನ್ನೆ ಬೆಳಗಿನ ಜಾವ ಕೋವಿಡ್ ಕೇರ್ ಸೆಂಟರ್ನಿಂದ ನಾಪತ್ತೆಯಾಗಿದ್ದು ಸಿಬ್ಬಂದಿ ಆತಂಕಕ್ಕೆ ಒಳಗಾಗಿದ್ದರು. ಇದನ್ನು ಗಮನಿಸಿದ ಆರೋಗ್ಯ ಇಲಾಖೆಯ ಸಿಬ್ಬಂದಿ ರಾಂಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಸೋಂಕಿತ ಕಾನ್ಸ್ಟೇಬಲ್ಗೆ ದೂರವಾಣಿ ಮೂಲಕ ಸಂಪರ್ಕಿಸಿ ವಾಪಸ್ ಕರೆಸುವಲ್ಲಿ ಇದೀಗ ರಾಂಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಇವರು ಕಾರಿನಲ್ಲಿ ಬಳ್ಳಾರಿಗೆ ತೆರಳಿದ್ದರು ಎನ್ನಲಾಗಿದೆ. ರಾಂಪುರದಿಂದ 25 ಕಿ.ಮೀ ದೂರದ ಬಳ್ಳಾರಿಗೆ ತಾವೇ ಕಾರು ಚಲಾಯಿಸಿಕೊಂಡು ಹೋಗಿದ್ದರು ಎಂದು ತಿಳಿದುಬಂದಿದೆ. ಮಾನಸಿಕ ಒತ್ತಡಕ್ಕೆ ಒಳಗಾಗಿರುವ ಸೋಂಕಿತ ಪೊಲೀಸ್ ಕಾನ್ಸ್ಟೇಬಲ್ ಈ ರೀತಿ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.