ಚಿತ್ರದುರ್ಗ: ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ರೌಡಿಶೀಟರ್ನನ್ನು ಅರೆಬೆತ್ತಲೆಯಲ್ಲೇ ಪೊಲೀಸರು ಠಾಣೆಗೆ ಕರೆತಂದಿರುವ ವಿಚಿತ್ರ ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯಲ್ಲಿ ನಡೆದಿದೆ ಎನ್ನಲಾಗ್ತಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೇಣುಗೋಪಾಲ್ ಎಂಬ ರೌಡಿಶೀಟರ್ ಸ್ನಾನ ಮಾಡುತ್ತಿದ್ದ ಸಂದರ್ಭದಲ್ಲೇ ಆತನನ್ನು ಪೊಲೀಸರು ಕರೆತಂದಿರುವ ಆರೋಪ ಕೇಳಿಬಂದಿದೆ. ಪಕ್ಕದ ಮನೆಯವರಿಗೆ ಚಪ್ಪಲಿಯಿಂದ ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ವೇಣುಗೋಪಾಲ್ ವಿರುದ್ಧ ಬಂಧನ ವಾರೆಂಟ್ ಜಾರಿಯಾಗಿತ್ತು.
ಹೀಗಾಗಿ ಪೊಲೀಸ್ ಸಿಬ್ಬಂದಿ ಚಂದ್ರಾನಾಯ್ಕ್ ಅವರು ಆರೋಪಿ ವೇಣುಗೋಪಾಲ್ ಬಂಧನಕ್ಕೆ ತೆರಳಿದ್ದಾರೆ. ಈ ವೇಳೆ ಅರೆಬೆತ್ತಲೆ ಸ್ಥಿತಿಯಲ್ಲೇ ವೇಣುಗೋಪಾಲ್ನನ್ನು ಠಾಣೆಗೆ ಕರೆ ತಂದಿರುವ ಪ್ರಸಂಗ ನಡೆದಿದೆ.
ಚಂದ್ರಾನಾಯ್ಕ್ ಆರೋಪಿಯನ್ನು ಕರೆತರಲು ಹೋದಾಗ ಆರೋಪಿ ವೇಣುಗೋಪಾಲ್ ಸ್ನಾನ ಮಾಡುತ್ತಿದ್ದ. ಆಗ ಆರೋಪಿ ಅದೇ ಅರೆಬೆತ್ತಲೆ ಸ್ಥಿತಿಯಲ್ಲಿ ಕೈಯಲ್ಲಿ ಜಗ್ ಹಿಡಿದುಕೊಂಡು ಪೊಲೀಸರ ಜತೆ ಠಾಣೆಗೆ ಬಂದಿದ್ದಾನೆ.
ಸದ್ಯಕ್ಕೆ ಆರೋಪಿ ವೇಣುಗೋಪಾಲ್ ಜಾಮೀನು ಪಡೆದು ಹೊರ ಬಂದಿದ್ದಾನೆ. ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರೋಪಿ ವೇಣುಗೋಪಾಲ್, ನಾನು ಸ್ನಾನ ಮಾಡುತ್ತಿದ್ದೆ. ಸ್ನಾನ ಮುಗಿಸಿಕೊಂಡು ಬರುತ್ತೇನೆ ಎಂದು ಹೇಳಿದೆ. ಆದರೂ ಚಂದ್ರಾನಾಯ್ಕ್ ಕೇಳಲಿಲ್ಲ. ದುರುದ್ದೇಶದಿಂದ ನನ್ನನ್ನು ಅರೆಬೆತ್ತಲೆ ಮೆರವಣಿಗೆ ಮಾಡಿದ್ದಾರೆ. ಈ ಬಗ್ಗೆ ಮೇಲಾಧಿಕಾರಿಗಳಿಗೆ ದೂರು ನೀಡುತ್ತೇನೆ ಎಂದಿದ್ದಾನೆ.
ಇದನ್ನೂ ಓದಿ: ತೆಂಗಿನಕಾಯಿ ಮಾರಾಟ ಸೋಗಿನಲ್ಲಿ ಆನ್ಲೈನ್ ಮೂಲಕ ₹ 45 ಸಾವಿರ ವಂಚನೆ