ಚಿತ್ರದುರ್ಗ: ದೇಶಾದ್ಯಂತ ಲಾಕ್‍ಡೌನ್ ಜಾರಿಗೊಳಿಸಿದ ಪರಿಣಾಮವಾಗಿ, ಜಿಲ್ಲೆಯಲ್ಲಿ ಉಳಿದುಕೊಂಡಿದ್ದ ಹೊರ ರಾಜ್ಯದ ಕಾರ್ಮಿಕರು, ಪ್ರವಾಸಿಗರು ಹಾಗೂ ಇತರರು, ತಮ್ಮ ಸ್ವಂತ ಸ್ಥಳಕ್ಕೆ ಹೋಗಲು ಇಚ್ಛಿಸಿದವರಿಗೆ ಅನುಮತಿ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಸೂಚನೆ ನೀಡಿದ್ದಾರೆ.
ಕೋವಿಡ್-19 ರೋಗ ತಡೆಗಾಗಿ ದೇಶಾದ್ಯಂತ ಲಾಕ್‍ಡೌನ್ ಜಾರಿಯಲ್ಲಿದ್ದು, ಈ ಸಂದರ್ಭದಲ್ಲಿ ಅನ್ಯ ರಾಜ್ಯದ ಕಾರ್ಮಿಕರು ಮತ್ತಿತರರು, ಜಿಲ್ಲೆಯಲ್ಲಿ ಸಿಲುಕಿಕೊಂಡಿದ್ದು, ಅಂತಹವರನ್ನು ಅವರ ಸ್ವಂತ ಸ್ಥಳಕ್ಕೆ ಕಳುಹಿಸಿಕೊಡಲು ಅವಕಾಶ ಒದಗಿಸಿದೆ. ಹೀಗಾಗಿ ಚಿತ್ರದುರ್ಗ ಜಿಲ್ಲೆಯಲ್ಲಿ ಲಾಕ್‍ಡೌನ್ ಪರಿಣಾಮವಾಗಿ ಸಿಲುಕಿಕೊಂಡಿರುವ ಅನ್ಯ ರಾಜ್ಯದ ಕಾರ್ಮಿಕರು, ಯಾತ್ರಿಗಳು, ಪ್ರವಾಸಿಗರು, ವಿದ್ಯಾರ್ಥಿಗಳು ಹಾಗೂ ಇತರರು, ತಮ್ಮ ಸ್ವಂತ ಸ್ಥಳಕ್ಕೆ ಹೋಗಲು ಇಚ್ಛಿಸಿದಲ್ಲಿ, ಅಂತಹವರು ತಮ್ಮ ಕುಟುಂಬ ಸದಸ್ಯರನ್ನು ಒಳಗೊಂಡ ವಿವರ ನಮೂದಿಸಿದ ಅರ್ಜಿಯನ್ನು ಆಯಾ ತಾಲೂಕು ತಹಶೀಲ್ದಾರರ ಕಚೇರಿಗೆ ಸಲ್ಲಿಸಬಹುದಾಗಿದೆ.
ಆಸಕ್ತರು ಹಾಗೂ ಅವಶ್ಯಕತೆ ಇರುವವರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.