ಚಿತ್ರದುರ್ಗ : ಕೇಂದ್ರ ಸರ್ಕಾರ ಎಪಿಎಂಸಿ ಕಾಯ್ದೆ ತಿದ್ದುಪಡಿ ಜಾರಿ ಮಾಡುತ್ತಿದ್ದಂತೆ, ದೇಶದಲ್ಲಿ ಖಾಸಗಿ ಕೃಷಿ ಮಾರುಕಟ್ಟೆ ಭರದಿಂದ ಸಾಗಿವೆ. ಈ ಹಿನ್ನೆಲೆ ಕೋಟೆನಾಡಿನಲ್ಲೂ ಖಾಸಗಿ ಸಹಭಾಗಿತ್ವದ ಕೃಷಿ ಮಾರುಕಟ್ಟೆಗೆ ಸಿದ್ಧತೆ ನಡೆಯುತ್ತಿರುವಾಗಲೇ, ಕೃಷಿಕರಿಂದ ಪರ-ವಿರೋಧ ಚರ್ಚೆಗಳು ವ್ಯಕ್ತವಾಗುತ್ತಿವೆ.
ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಆರಂಭಗೊಂಡ 'ಅಕ್ಷಯ ಫುಡ್ ಪಾರ್ಕ್' ಒಡೆತನದ ಖಾಸಗಿ ಮಾರುಕಟ್ಟೆ ಕಳೆದ ಅಕ್ಟೋಬರ್ ತಿಂಗಳಲ್ಲಿ ಸರ್ಕಾರದ ಪರವಾನಿಗೆ ಪಡೆದಿದೆ. ಇದು ರೈತರ ಹಣ್ಣು- ಹಂಪಲು, ದವಸ-ಧಾನ್ಯ, ತರಕಾರಿ ಸೇರಿ ವಿವಿಧ ಬೆಳೆ ಕೊಳ್ಳಲು ತುದಿಗಾಲಿನಲ್ಲಿ ನಿಂತಿದೆ.
ಈ ಫುಡ್ ಪಾರ್ಕ್ ಒಟ್ಟು 1500 ಮೆಟ್ರಿಕ್ ಟನ್ ಸಾಮರ್ಥ್ಯ ಇರುವ 8 ಶೀತಲೀಕರಣ ಸಂಸ್ಕರಣಾ ಘಟಕ ಹೊಂದಿದೆ. ಮುಂಬರುವ ಏಪ್ರಿಲ್ ತಿಂಗಳಿನಲ್ಲಿ ಉದ್ಘಾಟನೆಗೊಂಡು ಅನ್ನದಾತರ ಬೆಳೆಗಳನ್ನು ಖರೀದಿಸಿ, ಆನ್ಲೈನ್ ಮೂಲಕ ಮಾರಾಟ ಮಾಡುವ ಪ್ರಕ್ರಿಯೆಗೆ ಮುಂದಾಗುತ್ತಿದೆ.
ಇದನ್ನು ರಾಜ್ಯದ ಮೊದಲ ಖಾಸಗಿ ಆನ್ಲೈನ್ ಮಾರುಕಟ್ಟೆ ಎಂದು ಹೇಳಲಾಗುತ್ತಿದೆ. ಮೊಟ್ಟೆ-ಮಾಂಸ ಹೊರತುಪಡಿಸಿ ಉಳಿದ ಎಲ್ಲಾ ಬೆಳೆಗಳನ್ನು ಸಂಗ್ರಹಿಸಿಡುವ ವ್ಯವಸ್ಥೆ ಭರದಿಂದ ಸಾಗುತ್ತಿದೆ. ರೈತರು ಈ ಫುಡ್ಪಾರ್ಕ್ನಲ್ಲಿ ತಮ್ಮ ದವಸ-ಧಾನ್ಯ ಸೇರಿ ತರಕಾರಿಗಳನ್ನು ತಂದಿಟ್ಟು ಹೆಚ್ಚಿನ ಬೆಲೆ ಸಿಕ್ಕಿದಾಗ ಆನ್ಲೈನ್ ಮೂಲಕ ಮಾರಾಟ ಮಾಡಲು ಅನುಕೂಲ ಮಾಡಿಕೊಡಲಾಗುತ್ತದೆ ಎಂದು ವ್ಯವಸ್ಥಾಪಕರು ಹೇಳಿದರೆ, ಇನ್ನೊಂದೆಡೆ ಈ ಮಾರುಕಟ್ಟೆಗೆ ರೈತರಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.
ರೈತರು ಹೇಳೋದೇನು? : ಈ ಮಾರುಕಟ್ಟೆಯಲ್ಲಿ ಸರ್ಕಾರ ವಿಧಿಸಿರುವ ಷರತ್ತುಗಳು ಪಾಲನೆ ಮಾಡುತ್ತಿಲ್ಲ ಎಂಬ ಮಾತು ಸಾರ್ವಜನಿಕರಿಂದ ಕೇಳಿ ಬರುತ್ತಿವೆ. ಫುಡ್ ಪಾರ್ಕ್ನಿಂದ ರೈತರಿಗಾಗಲಿ, ಸಣ್ಣ ಕೈಗಾರಿಕೋದ್ಯಮಿಗಳಿಗಾಗಲಿ ಯಾವುದೇ ಅನುಕೂಲವಾಗುತ್ತಿಲ್ಲ. ಇದು ಕೇವಲ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಸಬ್ಸಿಡಿ ಹಣ ಹೊಡೆಯಲು ಮಾಡಿಕೊಂಡಿರುವ ಮಾರುಕಟ್ಟೆ ಎಂದು ರೈತರಿಂದ ಗಂಭೀರ ಆರೋಪ ಕೇಳಿ ಬರುತ್ತಿದೆ.
ಓದಿ: ಸಿಎಂ ಕುಟುಂಬದ ವಿರುದ್ಧ ಯತ್ನಾಳ್ ಆರೋಪದಲ್ಲಿ ನ್ಯಾಯವಿದೆ: ಹೆಚ್.ವಿಶ್ವನಾಥ್
ಇತ್ತ ಸಣ್ಣ ರೈತರಿಗೆ ಈ ದಾಸ್ತಾನುಗಳು ಕೈಗೆ ನಿಲುಕುವುದಿಲ್ಲ. ಬದಲಾಗಿ ದುಬಾರಿಯಾಗಿದೆ ಎಂಬ ಮಾತುಗಳು ರೈತರಿಂದ ಬಲವಾಗಿ ಕೇಳಿ ಬರುತ್ತಿವೆ. ಮಾರುಕಟ್ಟೆಯಲ್ಲಿ ಬೆಂಬಲ ಬೆಲೆ ಸಿಗುವುದು ಕಷ್ಟಕರ ಎಂದು ರೈತರು ಅಸಮಾಧಾನ ಹೊರಹಾಕಿ ಗಂಭೀರ ಆರೋಪ ಮಾಡುತ್ತಿದ್ದಾರೆ.
ಕೃಷಿ ಮಾರುಕಟ್ಟೆಗೆ ವ್ಯಾಪಕ ವಿರೋಧ : ಒಟ್ಟಿನಲ್ಲಿ ನೂತನ ಎಪಿಎಂಸಿ, ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಹೋರಾಟ ಒಂದು ಕಡೆಯಾದರೆ, ಇತ್ತ ಸರ್ಕಾರ ಸದ್ದಿಲ್ಲದೆ ಖಾಸಗಿ ಸಹಭಾಗಿತ್ವದಲ್ಲಿ ಮಾರುಕಟ್ಟೆಗಳ ಆರಂಭಕ್ಕೆ ಮುನ್ನುಡಿ ಬರೆಯುತ್ತಿದೆ. ಕೋಟೆನಾಡಿನಲ್ಲಿ ಆರಂಭವಾಗುತ್ತಿರುವ ಖಾಸಗಿ ಕೃಷಿ ಮಾರುಕಟ್ಟೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಇದು ಎಷ್ಟು ಜನ ರೈತರಿಗೆ ಉಪಯೋಗವಾಗಲಿದೆ ಎಂಬುದನ್ನ ಕಾದು ನೋಡಬೇಕಿದೆ.