ಚಿತ್ರದುರ್ಗ: ಮೊದಲ ಹಂತದಲ್ಲಿ ನಡೆಯುವ 100 ಗ್ರಾಮ ಪಂಚಾಯತಿ ಚುನಾವಣೆಯ 1,753 ಸ್ಥಾನಗಳಿಗೆ 5,831 ನಾಮಪತ್ರಗಳು ಸ್ವೀಕೃತವಾಗಿವೆ ಎಂದು ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ತಿಳಿಸಿದ್ದಾರೆ.
ಹೊಸದುರ್ಗ ತಾಲೂಕಿನ ವರದಿ ಹೊರತುಪಡಿಸಿ, 3,914 ಅಭ್ಯರ್ಥಿಗಳು ಕ್ರಮಬದ್ಧವಾಗಿ ನಾಮನಿರ್ದೇಶಿತರಾಗಿದ್ದಾರೆ.. ಮೊದಲ ಹಂತದ ಚುನಾವಣೆಗೆ ಈಗಾಗಲೇ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದು ಆಯಾ ತಾಲೂಕುಗಳ ಅನ್ವಯವಾಗಿ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದರು.
ಚಿತ್ರದುರ್ಗ 2,431, ಹೊಸದುರ್ಗ 1,847 ಹಾಗೂ ಹೊಳಲ್ಕೆರೆ 1,553 ಸೇರಿದಂತೆ ಒಟ್ಟು 5,831ನಾಮಪತ್ರಗಳು ಸಲ್ಲಿಕೆಯಾಗಿವೆ. ಚಿತ್ರದುರ್ಗ ತಾಲೂಕಿನಲ್ಲಿ 01 ಹಾಗೂ ಹೊಳಲ್ಕೆರೆ ತಾಲೂಕಿನ 02 ಸೇರಿದಂತೆ ಒಟ್ಟು 03 ಸ್ಥಾನಗಳಿಗೆ ನಾಮಪತ್ರಗಳು ಸಲ್ಲಿಕೆಯಾಗದೆ ಖಾಲಿ ಉಳಿದಿದೆ ಎಂದು ಡಿಸಿ ಮಾಹಿತಿ ನೀಡಿದರು.
ಓದಿ: ಆರ್ಥಿಕ ಸಂಕಷ್ಟದ ಎಫೆಕ್ಟ್; ಜನ ಕಲ್ಯಾಣ ಯೋಜನೆಗಳ ಅನುದಾನಗಳಿಗೆ ಕತ್ತರಿ!
ಚಿತ್ರದುರ್ಗ ತಾಲೂಕಿನ 28 ಹಾಗೂ ಹೊಳಲ್ಕೆರೆ ತಾಲೂಕಿನ 04 ಸೇರಿ ಒಟ್ಟು 34 ನಾಮಪತ್ರಗಳು ತಿರಸ್ಕೃತ ಗೊಂಡಿವೆ. ಹೊಸದುರ್ಗ ತಾಲೂಕಿನ ಕೆಲ್ಲೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಕುರುಬರಹಳ್ಳಿ ಗ್ರಾಮದ ನಾಮಪತ್ರಗಳ ಪರಿಶೀಲನೆ ಮುಂದೂಡಿದ ಕಾರಣ, ತಾಲೂಕಿನ ವರದಿ ಪರಿಶೀಲನೆ ಬಳಿಕ ನೀಡಲಾಗುವುದು ಎಂದು ಅವರು ತಿಳಿಸಿದರು.
ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಕಾನೂನು ಉಲ್ಲಂಘನೆ ಮಾಡಿದ್ರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಇದೇ ವೇಳೆ ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.