ಚಿತ್ರದುರ್ಗ : ಬಯಲು ಸೀಮೆ ದಸರಾ ಎಂದು ಖ್ಯಾತಿ ಪಡೆದಿರುವ ಚಿತ್ರದುರ್ಗ ಶರಣ ಸಂಸ್ಕೃತಿ ಉತ್ಸವ ಮತ್ತು ಲಿಂಗೈಕ್ಯ ಜಗದ್ಗುರು ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳವರ 28ನೇ ಸ್ಮರಣೋತ್ಸವ ಹಿನ್ನೆಲೆ ಪ್ರತಿಷ್ಠಿತ ಮುರುಘಾ ಮಠದಿಂದ ನೀಡುವ 2019ರ ಬಸವಶ್ರೀ ಪ್ರಶಸ್ತಿಗೆ ಹೆಸರುಗಳನ್ನು ಘೋಷಿಸಲಾಗಿದೆ.
ಬಸವಶ್ರೀ ಪ್ರಶಸ್ತಿ ಪುರಸ್ಕೃತರು : ಡಾ. ಪಂಡಿತ್ ರಾಜೀವ್ ತಾರಾನಾಥ್, ಖ್ಯಾತ ಸರೋದ್ ವಾದಕರು, ಮೈಸೂರು
ಸಾಂಪ್ರದಾಯಿಕ ಹಿಂದೂಸ್ತಾನಿ ಸಂಗೀತಕ್ಕೆ ವಿಶಿಷ್ಟವಾದ ಮಾಧುರ್ಯ ಮತ್ತು ಲಯವನ್ನು ನೀಡಿ ಭಾವನಾಲೋಕದ ತೀವ್ರತೆಯನ್ನು ತಮ್ಮ ವಾದನದಲ್ಲಿ ಸಮ್ಮಿಶ್ರಗೊಳಿಸುವ ಸಂಗೀತಲೋಕದ ಧ್ರುವತಾರೆ ಪಂಡಿತ್ ರಾಜೀವ್ ತಾರಾನಾಥ್‍ರವರು. 1932ರ ಅಕ್ಟೋಬರ್ 17ರಂದು ಜನಿಸಿದ ಶ್ರೀಯುತರಿಗೆ ತಂದೆ ಪಂಡಿತ್ ತಾರಾನಾಥ್‍ರೇ ಮೊದಲ ಸಂಗೀತ ಗುರು. ಸಂಗೀತದಲ್ಲಿ ಅಪಾರ ಒಲವು ಹೊಂದಿದ್ದ ತಾರಾನಾಥ್ ಮುಂದೆ ತಮ್ಮ ಪ್ರಾಧ್ಯಾಪಕ ಹುದ್ದೆಯನ್ನು ತ್ಯಜಿಸಿ ಹಿಂದೂಸ್ತಾನಿ ಸಂಗೀತದ ಉಸ್ತಾದ್ ಅಲಿ ಅಕ್ಬರ್‍ಖಾನ್‍ರಲ್ಲಿ ತರಬೇತಿ ಪಡೆದರು.
ಪಂಡಿತ ರವಿಶಂಕರ್, ಅನ್ನಪೂರ್ಣಾದೇವಿಯರಂತಹ ಸಂಗೀತ ದಿಗ್ಗಜರ ಮಾರ್ಗದರ್ಶನವೂ ಲಭಿಸಿ ಹಿಂದೂಸ್ತಾನಿ ಸಂಗೀತಕ್ಕೆ ಅಂತಾರಾಷ್ಟ್ರೀಯ ಮನ್ನಣೆ ಸಿಗುವಲ್ಲಿ ಇವರ ಕೊಡುಗೆಯೂ ಅಪಾರವಾಯಿತು. ಸಂಸ್ಕಾರ, ಪಲ್ಲವಿ, ಕಾಂಚನಸೀತಾದಂತಹ ಅಂತಾರಾಷ್ಟ್ರೀಯ ಖ್ಯಾತಿಯ ಚಲನಚಿತ್ರಗಳಿಗೆ ನೀಡಿದ ಸಂಗೀತ ಹೊಸ ಅಲೆಯನ್ನು ಸೃಷ್ಟಿಸಿತು.
ಭಾರತ ಮಾತ್ರವಲ್ಲದೆ, ಆಸ್ಟ್ರೇಲಿಯಾ, ಯೂರೋಪ್, ಅಮೆರಿಕ, ಕೆನಡಾ ಮೊದಲಾದ ದೇಶಗಳಲ್ಲಿ ಇವರು ನೀಡಿದ ಕಾರ್ಯಕ್ರಮಗಳು ಶ್ರೀಯುತರಿಗೆ ಮಾತ್ರವಲ್ಲದೆ ಹಿಂದೂಸ್ತಾನಿ ಸಂಗೀತಕ್ಕೂ ವಿಶ್ವಮನ್ನಣೆ ತಂದು ಕೊಟ್ಟವು. ಸಂಗೀತದ ವಿವಿಧ ರಾಗಗಳ ಕುರಿತ 21ಕ್ಕೂ ಹೆಚ್ಚು ಧ್ವನಿಸುರಳಿಗಳು, `ಘರಾನ' ಕುರಿತ ವಿದ್ವತ್ಪೂರ್ಣ ಕೃತಿ ರಚಿಸಿರುವ ರಾಜೀವ್ ತಾರಾನಾಥ್‍ರ ಜೀವನ ಸಾಧನೆಯನ್ನು ಕುರಿತು `ಸರೋದ್ ಮಾಂತ್ರಿಕ' ಎಂಬ ಕನ್ನಡ ಕೃತಿಯೂ ಪ್ರಕಟವಾಗಿದೆ.
ಸಂಗೀತ ಕ್ಷೇತ್ರದಲ್ಲಿಯ ಇವರ ಸಾಧನೆಗೆ ಟಿ.ಚೌಡಯ್ಯ ಪ್ರಶಸ್ತಿ, ನಾಟಕ ಮತ್ತು ನೃತ್ಯ ಅಕಾಡೆಮಿ ಪ್ರಶಸ್ತಿ, ರಾಷ್ಟ್ರೀಯ ಸಮ್ಮಾನ, ಕೆಂಪೇಗೌಡ ಪ್ರಶಸ್ತಿ, ಸಂಗೀತ ಕಲಾರತ್ನ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಹಂಪಿ ವಿವಿಯ ನಾಡೋಜ ಪ್ರಶಸ್ತಿಗಳ ಜೊತೆಗೆ ಭಾರತ ಸರ್ಕಾರವು 2019ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ತಮ್ಮ 90ನೇ ಇಳಿವಯಸ್ಸಿನಲ್ಲಿಯೂ ಮೈಸೂರಿನಲ್ಲಿ ಪಂಡಿತ್ ತಾರಾನಾಥ್ ಫೌಂಡೇಶನ್ ಮೂಲಕ ನಾಡಿನ ಯುವಸಂಗೀತಗಾರರಿಗೆ ಮಾರ್ಗದರ್ಶನ ನೀಡುತ್ತಿರುವ ಶ್ರೀಯುತರ ಸಂಗೀತ ಕ್ಷೇತ್ರದಲ್ಲಿಯ ಅನುಪಮವಾದ ಸಾಧನೆಯನ್ನು ಗುರುತಿಸಿರುವ ಚಿತ್ರದುರ್ಗ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠವು 2019ನೇ ಸಾಲಿನ ಪ್ರತಿಷ್ಠಿತ `ಬಸವಶ್ರೀ' ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ.
ಡಾ. ಕೆ. ಕಸ್ತೂರಿ ರಂಗನ್ ಬಾಹ್ಯಾಕಾಶ ವಿಜ್ಞಾನಿ, ಮಾಜಿ ಅಧ್ಯಕ್ಷರು, ಇಸ್ರೋ - ಬಸವಶ್ರೀ ಪ್ರಶಸ್ತಿ - 2020
ಬಾಹ್ಯಾಕಾಶ ಸಂಶೋಧನೆಯಲ್ಲಿ ವಿಶ್ವದ ಬೆರಳೆಣಿಕೆಯ ಕೆಲವೇ ರಾಷ್ಟ್ರಗಳಲ್ಲಿ ಭಾರತವು ಮುಂಚೂಣಿಯಲ್ಲಿ ನಿಲ್ಲುವ ರಾಷ್ಟ್ರವಾಗಲು ಅಪಾರ ಪರಿಶ್ರಮ ವಹಿಸಿದ ಡಾ. ಕೆ. ಕಸ್ತೂರಿ ರಂಗನ್‍ರವರು ಭಾರತೀಯ ಬಾಹ್ಯಾಕಾಶ ವಿಜ್ಞಾನಿಗಳಲ್ಲಿ ಪ್ರಮುಖರು. 1940ರ ಅಕ್ಟೋಬರ್ 24ರಂದು ಕೇರಳದ ಎರ್ನಾಕುಲಂನಲ್ಲಿ ಜನಿಸಿದ ಕೃಷ್ಣಸ್ವಾಮಿ ಕಸ್ತೂರಿ ರಂಗನ್‍ರವರದು ಬಾಹ್ಯಾಕಾಶ ಸಂಶೋಧನೆಯಲ್ಲಿ ವಿಶಿಷ್ಟ ಹೆಸರು.
ಬೆಂಗಳೂರಿನ ಇಸ್ರೋ ಸಂಸ್ಥೆಯ ನಿರ್ದೇಶಕರಾಗಿ, ಅಧ್ಯಕ್ಷರಾಗಿ, ಇವರ ಉಸ್ತುವಾರಿಯಲ್ಲಿ ಅಭಿವೃದ್ಧಿ ಹೊಂದಿದ ಭಾರತೀಯ ರಾಷ್ಟ್ರೀಯ ಇನ್ಸಾಟ್-2, ದೂರಸಂವೇದಿ ಐಆರ್‍ಎಸ್-1ಎ, 1ಬಿ, ಭೂವೀಕ್ಷಣೆಯ ಭಾಸ್ಕರ 1 ಮತ್ತು 2 ಹಾಗೂ ಸಾಗರ ವೀಕ್ಷಣೆಯ ಉಪಗ್ರಹಗಳ ಯಶಸ್ವಿ ಉಡಾವಣೆಯು ಖಗೋಳ ಗ್ರಹಗಳ ಸಂಶೋಧನೆಯಲ್ಲಿ ಇವರ ವೈಜ್ಞಾನಿಕ ಪರಿಶ್ರಮದಿಂದಾಗಿ ವಿಶ್ವಮಟ್ಟದಲ್ಲಿ ಭಾರತಕ್ಕೆ ಅಪೂರ್ವ ಸ್ಥಾನವನ್ನು ತಂದುಕೊಟ್ಟಿತು.
ಖಗೋಳಶಾಸ್ತ್ರ, ಬಾಹ್ಯಾಕಾಶ ವಿಜ್ಞಾನ ವಿಷಯಗಳ ಕುರಿತಂತೆ ದೇಶ-ವಿದೇಶಗಳಲ್ಲಿ 240ಕ್ಕೂ ಹೆಚ್ಚು ಪ್ರಬಂಧಗಳನ್ನು ಮಂಡಿಸಿರುವ ಶ್ರೀಯುತರು ವಿಶ್ವದ ವಿವಿಧ ದೇಶಗಳ ವಿಜ್ಞಾನ ಅಕಾಡೆಮಿ ಮತ್ತು ಶೈಕ್ಷಣಿಕ ಸಂಸ್ಥೆಗಳ ಸದಸ್ಯರಾಗಿ, ರಾಜ್ಯಸಭಾ ಸದಸ್ಯರಾಗಿ, ಯೋಜನಾ ಆಯೋಗದ ಸದಸ್ಯರಾಗಿ, ರಾಷ್ಟ್ರೀಯ ಶಿಕ್ಷಣ ನೀತಿ-2020ರ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ.
ಶ್ರೀಯುತರ ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದ ಪರಿಣತಿಗೆ ವಿಕ್ರಂ ಸಾರಾಬಾಯಿ, ಶಾಂತಿಸ್ವರೂಪ ಭಟ್ನಾಗರ್, ಎಂ.ಎನ್. ಸಹಾ ಪ್ರಶಸ್ತಿಗಳು ಮೊದಲ್ಗೊಂಡು ರಾಷ್ಟ್ರೀಯ-ಅಂತಾರಾಷ್ಟ್ರೀಯ ಪ್ರಶಸ್ತಿಗಳ ಜೊತೆಗೆ ದೇಶದ 16ಕ್ಕೂ ಹೆಚ್ಚು ವಿ.ವಿ.ಗಳು ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿವೆ. ಇವೆಲ್ಲಕ್ಕೂ ಕಳಸವಿಟ್ಟಂತೆ ಭಾರತಸರ್ಕಾರದ ಪದ್ಮಶ್ರೀ (1982), ಪದ್ಮಭೂಷಣ (1992) ಹಾಗು ಪದ್ಮವಿಭೂಷಣ (2000) ಪ್ರಶಸ್ತಿಗಳ ಗೌರವಕ್ಕೆ ಭಾಜನರಾಗಿದ್ದಾರೆ.
ತನುಶ್ರೀ ಉಡುಪಿ - ಭರಮಣ್ಣ ನಾಯಕ ಶೌರ್ಯ ಪ್ರಶಸ್ತಿ
ಜಗತ್ತನ್ನು ಬೆರಗುಗಣ್ಣಿಂದ ನೋಡುವ ವಯಸ್ಸಿನಲ್ಲಿ ಇಡೀ ಜಗತ್ತೇ ತನ್ನನ್ನು ಬೆರಗುಗಣ್ಣಿಂದ ನೋಡುವಂತಹ ಅಪ್ರತಿಮ ಸಾಧನೆ ಮಾಡಿರುವ ಉಡುಪಿಯ ತನುಶ್ರೀ ಯೋಗ ಸಾಧನೆಯಲ್ಲಿ 7 ವಿಶ್ವದಾಖಲೆಗಳನ್ನ ಮಾಡಿರುವ ಸರದಾರಿಣಿ. 15-03-2009ರಲ್ಲಿ ಉಡುಪಿಯ ಸಂಧ್ಯಾ ಮತ್ತು ಉದಯಕುಮಾರ್ ದಂಪತಿಯ ಸುಪುತ್ರಿಯಾಗಿ ಜನಿಸಿದ ತನುಶ್ರೀ 3ನೇ ವಯಸ್ಸಿನಲ್ಲಿಯೇ ನೃತ್ಯಾಭ್ಯಾಸ ಮಾಡಿ, ಜೊತೆಗೆ ಭರತನಾಟ್ಯ, ಯಕ್ಷಗಾನ ಮತ್ತು ಹುಲಿವೇಷ ಕುಣಿತದಲ್ಲೂ ಸೈ ಎನಿಸಿಕೊಂಡ ಬಹುಮುಖ ಪ್ರತಿಭೆ. ಈಕೆ ಪಬ್ಲಿಕ್ ಟಿವಿಯ ಪಬ್ಲಿಕ್ ಹೀರೋ ಆಗಿ ಗುರುತಿಸಿಕೊಂಡವಳು.
13ವರ್ಷದ ಈ ಪೋರಿ ಯೋಗಾಸನದ ಅಸಾಧ್ಯ ಭಂಗಿಗಳಲ್ಲಿ ಅದ್ವಿತೀಯ ಸಾಧನೆ ಮಾಡಿ ಗೋಲ್ಡನ್ ಬುಕ್ ಆಪ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಈವರೆಗೆ ದಾಖಲೆಯ 7 ವಿಶ್ವದಾಖಲೆಗಳನ್ನು ಮುಡಿಗೇರಿಸಿಕೊಂಡಿದ್ದಾಳೆ. ತನ್ನ 3 ವಿಶ್ವದಾಖಲೆಗಳನ್ನು ಹಾಗೂ ಧನುರಾಸನ ವಿಶ್ವದಾಖಲೆಯಲ್ಲಿ ಪಡೆದ ಹಣವನ್ನು ನಾಡಿನ ಯೋಧರಿಗೆ ಸಮರ್ಪಿಸುವ ಮೂಲಕ ತನ್ನ ದೇಶಭಕ್ತಿಯನ್ನೂ ಮೆರೆದಿದ್ದಾಳೆ.
ಮುರುಘಾಶ್ರೀ ಪ್ರಶಸ್ತಿ ಪುರಸ್ಕೃತರು
ಶ್ರೀ ಮ.ನಿ.ಪ್ರ. ಮಹಾಂತ ರುದ್ರೇಶ್ವರ ಸ್ವಾಮಿಗಳು, ಶ್ರೀ ರುದ್ರೇಶ್ವರ ವಿರಕ್ತಮಠ, ಹೆಬ್ಬಾಳು
ಆರೋಗ್ಯಪೂರ್ಣ ಸಮಾಜಕ್ಕಾಗಿ ಅವಿರತ ಶ್ರಮಿಸುತ್ತಿರುವವರು ಹೆಬ್ಬಾಳು ಶ್ರೀಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮಿಗಳು. ಹಾವೇರಿ ಜಿಲ್ಲೆ, ಶಿಗ್ಗಾಂವಿ ತಾಲೂಕು, ಕುಂದೂರಿನ ಶರಣ ಬಸವಣ್ಣಯ್ಯ ಮತ್ತು ಶರಣೆ ಹೇಮಾವತಿ ದಂಪತಿಯ ಸುಪುತ್ರರಾಗಿ ದಿ.24-12-1957ರಲ್ಲಿ ಜನಿಸಿದ ಶ್ರೀಗಳು, ತಮ್ಮ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಹುಟ್ಟೂರಿನಲ್ಲಿ ಪೂರೈಸಿದರು.
ಬಾಲ್ಯದಲ್ಲಿಯೇ ಸನ್ಯಾಸತ್ವದ ಬಗ್ಗೆ ಒಲವಿದ್ದ ಪೂಜ್ಯರು ಚಿತ್ರದುರ್ಗ ಮಠದ ಲಿಂ. ಮಲ್ಲಿಕಾರ್ಜುನ ಸ್ವಾಮಿಗಳ ಕೃಪೆಗೆ ಪಾತ್ರರಾಗಿ ಶ್ರೀಮಠದ ಶಾಖಾಮಠವಾದ `ಚಿಲುಮೆ ಮಠ'ಕ್ಕೆ ಪೀಠಾಧಿಕಾರಿಗಳಾಗಿ 1980ರಲ್ಲಿ ದೀಕ್ಷೆ ಪಡೆದರು. ಮುಂದೆ, ಹೆಬ್ಬಾಳುಮಠದ ಶ್ರೀ ರುದ್ರೇಶ್ವರ ಶ್ರೀಗಳು ಲಿಂಗೈಕ್ಯರಾದ ನಂತರ ಪೀಠಾಧಿಕಾರಿಗಳಾಗಿ ಪಟ್ಟಾಧಿಕಾರ ದೀಕ್ಷೆ ಪಡೆದರು.
ಶ್ರೀಮಠದಲ್ಲಿ ಬಸವಪುರಾಣ ಪ್ರವಚನ, ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಈವರೆಗೆ 6000ಕ್ಕೂ ಹೆಚ್ಚು ಜೋಡಿಗಳ ದಾಂಪತ್ಯ ಬದುಕಿಗೆ ಆಸರೆಯಾಗಿದ್ದಾರೆ. ಹೆಬ್ಬಾಳು ಗ್ರಾಮದ ಸುತ್ತ ಹಬ್ಬ-ಜಾತ್ರೆ ನೆಪದಲ್ಲಿ ನಡೆಯುತ್ತಿದ್ದ ಪ್ರಾಣಿ ಬಲಿಯನ್ನು ಜನರ ಮನವೊಲಿಸಿ ನಿಲ್ಲಿಸಿದ ಶ್ರೀಗಳು, ಬಸವಪುತ್ಥಳಿ ರಥೋತ್ಸವ, ಕತ್ತಲಿನಿಂದ ಬೆಳಕಿನೆಡೆಗೆ, ಮನೆಯಲ್ಲಿ ಮಹಾಮನೆ ಮುಂತಾದ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಧರ್ಮ ಜಾಗೃತಿ ಮೂಡಿಸುತ್ತ ಬಂದಿದ್ದಾರೆ.
ಶ್ರೀ ರುದ್ರೇಶ್ವರ ವಿದ್ಯಾಸಂಸ್ಥೆ ಮೂಲಕ ಶಾಲಾ-ಕಾಲೇಜು ಆರಂಭಿಸಿ ಗ್ರಾಮೀಣ ಭಾಗದ ಜನರ ಶೈಕ್ಷಣಿಕ ಹಸಿವನ್ನು ನೀಗಿಸುತ್ತಿದ್ದಾರೆ. ಮಠದ ಭಕ್ತರ ಸಹಕಾರದೊಂದಿಗೆ ಕಾರ್ಗಿಲ್ ಹುತಾತ್ಮರ ಕುಟುಂಬಗಳಿಗೆ, ನೆರೆ ಸಂತ್ರಸ್ತರಿಗೆ, ಕೋವಿಡ್-19 ಪೀಡಿತರಿಗೆ ಸಹಾಯ ಮಾಡುತ್ತಾ, ಜಗಳೂರು ತಾಲೂಕಿನ ಏತನೀರಾವರಿ ಹೋರಾಟದಲ್ಲೂ ಪಾಲ್ಗೊಂಡಿದ್ದಾರೆ. ಗೋವುಗಳ ಸಂರಕ್ಷಣೆಗಾಗಿ ಗೋಶಾಲೆ ನಿರ್ಮಾಣ, ಸ್ವತಃ ಕೃಷಿಕರಾಗಿ ಕೃಷಿಯಲ್ಲಿ ನವೀನ ಪದ್ಧತಿಗಳನ್ನು ಅನುಸರಿಸುತ್ತಾ ಸುತ್ತಲಿನ ಗ್ರಾಮಗಳಿಗೆ ಮಾದರಿಯಾಗಿದ್ದಾರೆ.
ಶ್ರೀ ರವೀಂದ್ರ ಭಟ್ ಐನಕೈ, ಕಾರ್ಯನಿರ್ವಾಹಕ ಸಂಪಾದಕರು, ಪ್ರಜಾವಾಣಿ ದಿನಪತ್ರಿಕೆ, ಬೆಂಗಳೂರು
ತಮ್ಮ ಬರಹಗಳ ಮೂಲಕವೇ ಸಮಾಜಕ್ಕೆ ಆರೋಗ್ಯದ ಪಾಠಗಳನ್ನು ನೀಡುತ್ತಿರುವ ರವೀಂದ್ರ ಭಟ್ಟ ಐನಕೈ ನಮ್ಮ ಮಧ್ಯದಲ್ಲಿ ಒಬ್ಬ ಸೃಜನಶೀಲ ಪತ್ರಕರ್ತರು. ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಐನಕೈ ಗ್ರಾಮದ ಶ್ರೀ ಗಜಾನನ ಭಟ್ ಮತ್ತು ಶ್ರೀಮತಿ ಮೀನಾಕ್ಷಿ ಭಟ್ ದಂಪತಿಗೆ ದಿ. 07-07-1967ರಲ್ಲಿ ಜನಿಸಿದ ರವೀಂದ್ರರು, ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಮತ್ತು ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಎಂಎ ಪದವಿ ಪಡೆದವರು.
1990ರಲ್ಲಿ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿ ಮುಂದೆ ಕನ್ನಡಮ್ಮ, ಅಭಿಮಾನಿ, ಅರಗಿಣಿ, ಈ ಸಂಜೆ, ಉದಯವಾಣಿ ಪತ್ರಿಕೆಗಳಲ್ಲೂ ಕೆಲಸ ಮಾಡಿ 1995ರಿಂದ ಕನ್ನಡದ ಹೆಮ್ಮೆಯ `ಪ್ರಜಾವಾಣಿ' ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರಚಲಿತ ವಿದ್ಯಮಾನಗಳ ಕುರಿತು ತಮ್ಮ ಲೇಖನಿಯನ್ನು ಝಳಪಿಸುವ ಶ್ರೀಯುತರ ಬರಹಗಳಲ್ಲಿ ಅಡಗಿರುವುದು ಮಾನವೀಯ ಅಂತಃಕರಣ.
ಇದು ಅವರ `ಇವರೇ ಬರಮಾಡಿಕೊಂಡ ಬರ', `ಹೆಜ್ಜೇನು', `ಬದುಕು ಮರದ ಮೇಲೆ', `ಮೂರನೇ ಕಿವಿ', `ಸಂಪನ್ನರು', `ಅಕ್ಷಯ ನೇತ್ರ', `ಸಹಸ್ರಪದಿ' ಮುಂತಾದ ಪ್ರಕಟಿತ ಕೃತಿಗಳಲ್ಲಿ ಕಾಣಿಸುತ್ತದೆ. ಸಾಹಿತ್ಯ ಮತ್ತು ಪತ್ರಿಕಾಕ್ಷೇತ್ರದ ಇವರ ಸಾಧನೆಗೆ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ, ಮಹಾತ್ಮಗಾಂಧಿ ಪ್ರಶಸ್ತಿ, ಚರಕ ಪ್ರಶಸ್ತಿ, ಹೆಚ್‌ಎಸ್‌ಕೆ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಪತ್ರಿಕೋದ್ಯಮ ಪ್ರಶಸ್ತಿಗಳು ಲಭಿಸಿವೆ.
ಡಾ. ಅಮ್ಜದ್ ಹುಸೇನ್ (ಹಾಫಿಜ್ ಕರ್ನಾಟಕಿ), ಜುಬೇದ ವಿದ್ಯಾಸಂಸ್ಥೆ, ಶಿಕಾರಿಪುರ
ಸಾಮಾನ್ಯ ಶಿಕ್ಷಕನೊಬ್ಬನು ತನ್ನ ಸಮಾಜಮುಖಿ ಚಿಂತನೆಗಳ ಮೂಲಕ ಅಸಾಮಾನ್ಯ ವ್ಯಕ್ತಿ ಹಾಗೂ ಶಕ್ತಿಯಾಗಬಹುದು ಎಂಬುದಕ್ಕೆ ಜ್ವಲಂತ ಉದಾಹರಣೆಯಂತಿದ್ದಾರೆ ಡಾ. ಅಮ್ಜದ್ ಹುಸೇನ್‍ರವರು. ಶಿಕಾರಿಪುರದ ಶಿಕ್ಷಕರಾದ ಶ್ರೀ ನಜೀರ್‍ಪಾಷ ಮತ್ತು ಶ್ರೀಮತಿ ಬಸೀರ್ ಉನ್ನೀಸಾ ದಂಪತಿಗೆ ಮಗನಾಗಿ 18-06-1964ರಲ್ಲಿ ಜನಿಸಿದ ಅಮ್ಜದ್ ಹುಸೇನ್, ವಿದ್ಯೆ ಮಾತ್ರವೇ ಬದುಕಿನಲ್ಲಿ ನಮ್ಮನ್ನು ಕಾಪಾಡಬಲ್ಲುದು ಎಂದು ನಂಬಿದವರು. ಶಿಕ್ಷಕ ತರಬೇತಿಯನ್ನು ಪಡೆದು ಶಾಲಾ ಶಿಕ್ಷಕರಾಗಿ ಸೇವೆ ಆರಂಭಿಸಿದರೂ `ಕಲಿಕೆಗೆ ಕೊನೆ ಇಲ್ಲ' ಎಂಬಂತೆ ಮುಂದೆ ಎಂಎ,ಬಿಇಡಿ ಪದವಿಯನ್ನು ಪಡೆದರು.
ಶಿಕ್ಷಕ ವೃತ್ತಿಯ ಜೊತೆಗೆ ಸಾಹಿತ್ಯದ ಗೀಳನ್ನು ಹೊಂದಿ ವಿಶೇಷವಾಗಿ ಮಕ್ಕಳ ಸಾಹಿತ್ಯ ರಚನೆಗೆ ಒತ್ತು ನೀಡುತ್ತಾ ಈವರೆಗೆ 51 ಕವನ ಸಂಕಲನಗಳು, 37ಕ್ಕೂ ಹೆಚ್ಚು ಗದ್ಯ ಕೃತಿಗಳನ್ನು ಹೊರ ತಂದಿದ್ದಾರೆ. ಸಾವಿರಾರು ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವನ್ನೂ ನೀಡುತ್ತ, `ಮದರಸಾ'ವನ್ನು ತೆರೆದು ಸಮಾಜದ ಬಡ, ಅನಾಥ ಮಕ್ಕಳಿಗೆ ಶಿಕ್ಷಣ ದಾಸೋಹ ನೀಡಿದ್ದಾರೆ. ರಾಜ್ಯದ ವಿವಿಧ ಶಾಲಾ-ಕಾಲೇಜು, ದೇವಾಲಯಗಳಲ್ಲಿ ಕೊಳವೆ ಬಾವಿಗಳನ್ನು ಹಾಕಿಸಿ ನೀರಿನ ದಾಹ ನೀಗಿಸಿದ್ದಾರೆ.
ಕರ್ನಾಟಕ ಉರ್ದು ಅಕಾಡೆಮಿಯ ಮಾಜಿ ಅಧ್ಯಕ್ಷರೂ ಆಗಿರುವ ಶ್ರೀಯುತರು ಹಲವು ಶೈಕ್ಷಣಿಕ ಸಂಸ್ಥೆಗಳ ಅಧ್ಯಕ್ಷರಾಗಿ, ಕಾರ್ಯದರ್ಶಿಗಳಾಗಿಯೂ ಸೇವೆ ಸಲ್ಲಿಸಿದ್ದಾರೆ. ಗುಲ್ಬರ್ಗಾ ಹಾಗೂ ಜೆರುಸಲೇಮ್ ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್ ಪದವಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳಿಗೂ ಭಾಜನರಾಗಿರುವ ಶ್ರೀಯುತರಿಗೆ ಹಲವು ಸಂಸ್ಥೆಗಳು ಗೌರವಿಸಿ ಸನ್ಮಾನಿಸಿವೆ. ಸರ್ವಧರ್ಮ ಸಮನ್ವಯಕಾರರಾಗಿ ನಾಡಿನ ವಿವಿಧ ಧರ್ಮಗುರುಗಳ ಜೊತೆ ಸೇರಿ ಸರ್ವಧರ್ಮ ಸಮ್ಮೇಳನಗಳನ್ನು ಆಯೋಜಿಸುವ ಮೂಲಕ ಸಾಮರಸ್ಯ ಮೆರೆದಿದ್ದಾರೆ.
ಶ್ರೀ ಯುಗಧರ್ಮ ರಾಮಣ್ಣ, ಜಾನಪದ ಜಂಗಮ ಹಾಗೂ ಕನಕಶ್ರೀ ಪ್ರಶಸ್ತಿ ಪುರಸ್ಕೃತರು, ಸಿದ್ಧನಮಠ, ದಾವಣಗೆರೆ ಜಿಲ್ಲೆ
'ಪುಸ್ತಕ ಸರಿ ಇದ್ದರೆ, ಪುಸ್ತಕ ಸುಟ್ಟು ಬರೆಯಬಹುದು| ಅದರ ವಿಸ್ತಾರ ವಿಕಾಸ ಆದಂತೆ ಎಂತೆಂಥ ಹಸ್ತಪ್ರತಿ ಹೊರಡುವುದೋ ಯುಗಧರ್ಮ' ಎಂಬಂತಹ ಸಾವಿರಾರು ತ್ರಿಪದಿ, ವಚನ, ಲಾವಣಿಗಳನ್ನು ಹಾಡುವ ಆಶುಕವಿ ಯುಗಧರ್ಮ ರಾಮಣ್ಣನವರು ಗ್ರಾಮ್ಯ ಸಿರಿಯನ್ನೇ ನೆಲೆಯಾಗಿಸಿಕೊಂಡ ದೇಸಿ ಪದಶಕ್ತಿಯ ಶಬ್ದಗಾರುಡಿಗ. ಭವದ ಬದುಕಿಗೆ ಭರವಸೆ ಮೂಡಿಸುತ್ತಾ ಸಂಕಟಗಳನ್ನೇ ಸಾಧನೆಗೆ ಸೋಪಾನವಾಗಿಸಿಕೊಂಡ ರಾಮಣ್ಣನವರು ದಾವಣಗೆರೆ ಜಿಲ್ಲೆಯ ಸಿದ್ಧನಮಠ ಗ್ರಾಮದ ಕೃಷಿಕ ಕೆಂಚಪ್ಪ ಮತ್ತು ಹುಚ್ಚಮ್ಮ ದಂಪತಿಗೆ ದಿ. 10.06.1938ರಲ್ಲಿ ಜನಿಸಿದರು.
ಕಿತ್ತು ತಿನ್ನುವ ಬಡತನ, ಊಟಕ್ಕು ಪರದಾಟ ನಡೆಸುತ್ತ ಜೀತದಾಳಾಗಿ ದುಡಿಯುತ್ತಿದ್ದ ಇವರ ಬದುಕಿನಲ್ಲಿ ಮಹಾಕವಿ ಕಾಳಿದಾಸನಂತೆ 1972ರಲ್ಲಿ ವಿಸ್ಮಯ ಪ್ರಸಂಗವೊಂದು ನಡೆದು ಆ ಕ್ಷಣದಿಂದಲೇ ಕವಿತೆ, ವಚನ, ತ್ರಿಪದಿ, ಲಾವಣಿಗಳನ್ನು ಬರೆಯಲು ಆರಂಭಿಸಿದರು. ಒಂದನೇ ತರಗತಿಯಲ್ಲಿ ಐದುಬಾರಿ ಫೇಲಾದ, ಕುರಿತೋದದೆಯುಂ ಕಾವ್ಯ ಪ್ರಯೋಗಮತಿಯಾದ ಯುಗಧರ್ಮ ರಾಮಣ್ಣ, `ಯುಗಧರ್ಮ ತತ್ವಪದಗಳು', `ಯುಗಧರ್ಮ ತ್ರಿಪದಿ', `ಕನ್ನಡಮ್ಮನ ತೇರು', `ವಚನ ಧರ್ಮ ಮತ್ತು ತೋಚಿದ್ಗೀಚು' ಎಂಬ 5 ಕೃತಿಪುಷ್ಪಗಳನ್ನು ಕನ್ನಡಮ್ಮನ ಸಿರಿ ಮುಡಿಗೇರಿಸಿದ ದಾರ್ಶನಿಕ ಕವಿ. ಅಭಿನವ ಸರ್ವಜ್ಞನಂತೆ ನಾಡಿನೆಲ್ಲೆಡೆ ಸುತ್ತುತ್ತ ಸುಮಾರು 13500ಕ್ಕು ಹೆಚ್ಚು ಕಾರ್ಯಕ್ರಮಗಳಲ್ಲಿ ಬುದ್ಧ, ಬಸವ, ಕನಕ, ನಿಜಗುಣರು ಹಾಗೂ ನಮ್ಮ ಜನಪದರ ಆಶಯಗಳನ್ನು ಬಿತ್ತುತ್ತಾ ಬಂದವರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಬಸವಭೂಷಣ ಪ್ರಶಸ್ತಿ, ಮಾಜಿಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಶರಣಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು.