ಚಿತ್ರದುರ್ಗ: ಹಾಜರಾತಿ ಕೊಡದೆ ಸಂಬಳಕ್ಕೆ ಕತ್ತರಿ ಹಾಕಿದ್ದಾರೆ ಎಂದು ಮನನೊಂದ ನಗರಸಭೆ ನೌಕರ ನಗರಸಭೆಯ ಹಿಂಭಾಗದ ನಿರ್ಮಾಣ ಹಂತದ ಕಟ್ಟಡದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತನನ್ನು ದಾವಣಗೆರೆ ಜಿಲ್ಲೆಯ ಹರಿಹರ ಮೂಲದ ಶಶಿ ಕುಮಾರ್ (25) ಎಂದು ಗುರುತಿಸಲಾಗಿದೆ. ಜಿಲ್ಲೆಯ ನಗರಸಭೆಯಲ್ಲಿ ಎಸ್ಡಿಎ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಸಾಯುವ ಮುನ್ನ ಸೆಲ್ಫಿ ವೀಡಿಯೋ ಮಾಡಿದ ನೌಕರ ಲಾಕ್ಡೌನ್ನಿಂದಾಗಿ ಕೆಲಸಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ. ಇದನ್ನೇ ಕಾರಣವಾಗಿಸಿಕೊಂಡು ನನ್ನನ್ನು ಸಸ್ಪೆಂಡ್ ಮಾಡಲು ಲೆಟರ್ ರೆಡಿ ಮಾಡಿದ್ದಾರೆ. ಹೀಗಾದರೆ ನನ್ನ ತಂದೆ ತಾಯಿಯನ್ನು ಸಾಕುವುದು ಹೇಗೆ? ಉದ್ದೇಶ ಪೂರ್ವಕವಾಗಿ ಮೇಲಾಧಿಕಾರಿಗಳು ನನಗೆ ತೊಂದರೆ ಕೊಡುತ್ತಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾನೆ.
ಇನ್ನು ನನ್ನ ಸಾವಿಗೆ ನಗರಸಭೆಯ ಮ್ಯಾನೇಜರ್ ಹಾಗೂ ಕಮಿಷನರ್ ಕಾರಣ ಎಂದು ಸೆಲ್ಫಿ ವಿಡಿಯೋದಲ್ಲಿ ಆರೋಪ ಮಾಡಿದ್ದಾನೆ. ಹಾಜರಾತಿ ತಿದ್ದುಪಡಿ ಮಾಡಿ ಅಮಾನತಿಗೆ ಬೆದರಿಕೆಯೊಡ್ಡಿದ್ದಾರೆ. ಆದ್ದರಿಂದ ಅಮ್ಮ, ಅಣ್ಣ, ದೊಡ್ಡಮ್ಮ, ಚಿಕ್ಕಮ್ಮ, ನನ್ನನ್ನು ಕ್ಷಮಿಸಿ ಎಂದು ವಿಡಿಯೋದಲ್ಲಿ ಹೇಳಿದ್ದಾನೆ.
ಇನ್ನು ಅಸ್ವಸ್ಥಗೊಂಡ ನೌಕರನನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾನೆ. ಈ ಸಂಬಂಧ ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.