ಚಿತ್ರದುರ್ಗ: ಪಿಂಚಣಿ ಸೌಲಭ್ಯ ಪಡೆಯಲು ಕಚೇರಿಗೆ ಅಲೆದಾಡುತ್ತಿದ್ದ ಅಜ್ಜಿಗೆ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ನೆರವಾಗಿದ್ದಾರೆ. ಪಿಂಚಣಿ ಸೌಲಭ್ಯ ಸಿಗದೆ ಹೈರಾಣಾಗಿದ್ದ ವಯೋವೃದ್ಧೆಗೆ ಸೌಲಭ್ಯ ದೊರೆಯುವಂತೆ ಮಾಡಿದ್ದಾರೆ.
ಹಿರಿಯೂರು ತಾಲೂಕಿನ ದೊಡ್ಡಕಟ್ಟೆ ಗ್ರಾಮದ ನಿವಾಸಿಯಾದ ಜಾನಕಮ್ಮ ಎಂಬ ವೃದ್ಧೆ ಪಿಂಚಣಿ ಸೌಲಭ್ಯಕ್ಕಾಗಿ ಸಂಬಂಧಪಟ್ಟ ಕಚೇರಿಗೆ ಭೇಟಿ ನೀಡಿದ್ದರೂ ಪಿಂಚಣಿ ಮಾತ್ರ ಮರೀಚಿಕೆಯಾಗಿತ್ತು. ಇದೇ ವೇಳೆ ದೊಡ್ಡಕಟ್ಟೆ ಗ್ರಾಮಕ್ಕೆ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದನ್ನು ಗಮನಿಸಿದ ವೃದ್ಧೆ ಜಾನಕಮ್ಮ, ಪಿಂಚಣಿ ಸೌಲಭ್ಯದಿಂದ ವಂಚಿತರಾಗಿರುವ ವಿಷಯವನ್ನು ಗಮನಕ್ಕೆ ತಂದಿದ್ದಾರೆ.
ಮಾಹಿತಿ ತಿಳಿದ ಶಾಸಕಿ ಪೂರ್ಣಿಮಾ ನಿಂತ ಜಾಗದಲ್ಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡುವ ಮೂಲಕ ಪಿಂಚಣಿ ಸೌಲಭ್ಯ ನೀಡುವಂತೆ ತಾಕೀತು ಮಾಡಿದ್ದಾರೆ. ಶಾಸಕಿ ಹೇಳಿದ ಒಂದೇ ಮಾತಿಗೆ ಅಜ್ಜಿ ಜಾನಕಮ್ಮಗೆ ಒಂದು ವಾರದಲ್ಲೇ ಪಿಂಚಣಿ ಸೌಲಭ್ಯ ಸಿಕ್ಕಿದೆ.
ಇದರಿಂದ ಸಂತಸಗೊಂಡ ವೃದ್ಧೆ ಜಾನಕಮ್ಮ, ಸಮುದ್ರಹಳ್ಳಿ ಚೆಕ್ ಡ್ಯಾಂಗೆ ಬಾಗಿನ ಅರ್ಪಿಸಲು ಶಾಸಕಿ ಪೂರ್ಣಿಮಾ ಬಂದಾಗ, ಅಲ್ಲೇ ಕಣ್ಣೀರು ಹಾಕುತ್ತಾ ಅವರಿಗೆ ಹೂಮಾಲೆ ಹಾಕುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.