ಚಿತ್ರದುರ್ಗ: ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಕೈಗೊಂಡ ಪಾದಯಾತ್ರೆ ಸ್ಥಳಕ್ಕೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ನೇತೃತ್ವದ ಪಂಚಮಸಾಲಿ ಶಾಸಕರ, ಮುಖಂಡರ ತಂಡ ಆಗಮಿಸಿದೆ.
ಇಂದು ಹಿರಿಯೂರು ತಾಲೂಕಿನ ಜವಬಗೊಂಡನಹಳ್ಳಿ ಇಂದಿರಾಗಾಂಧಿ ಶಾಲೆಗೆ ಪಾದಯಾತ್ರೆ ತಲುಪುತ್ತಿದ್ದಂತೆ ಸ್ಥಳಕ್ಕೆ ಪಂಚಮಸಾಲಿ ಶಾಸಕರು ಹಾಗೂ ಮುಖಂಡರು ಕೂಡಲಸಂಗದ ಪಂಚಮಸಾಲಿ ಪೀಠಾಧ್ಯಕ್ಷ ಜಯ ಬಸವ ಮೃತ್ಯುಂಜಯ ಸ್ವಾಮೀಜಿ ಹಾಗೂ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳನ್ನ ಭೇಟಿ ಮಾಡಲು ಆಗಮಿಸಿದ್ದಾರೆ.
ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಎಂಎಲ್‌ಸಿ ಹನುಮಂತ ನಿರಾಣಿ, ರಾಣಿಬೆನ್ನೂರು ಶಾಸಕ ಅರುಣಕುಮಾರ ಪೂಜಾರ, ಮಾಜಿ ಎಂಎಲ್‌ಸಿ ಎಂ.ಪಿ ನಾಡಗೌಡ, ಶಾಸಕ ಶಂಕರ ಮುನೇನಕೊಪ್ಪ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ, ರವಿಕಾಂತ ಪಾಟೀಲ, ಪಂಚಮಸಾಲಿ ಯುವ ಮುಖಂಡ ವಿಜೇತ ಪಾಟೀಲ ಸೇರಿದಂತೆ ಹಲವರು ಶ್ರೀಗಳನ್ನ ಭೇಟಿ ಮಾಡಲಿದ್ದಾರೆ.
ಮುಂದಿನ ಹೋರಾಟದ ರೂಪುರೇಷೆ ಹಾಗೂ ಮೀಸಲಾತಿ ಪಡೆಯುವ ಕುರಿತು ಶ್ರೀಗಳ ಜೊತೆಗೆ ಚರ್ಚಿಸುವ ಸಾಧ್ಯತೆಯಿದೆ. ನಾಳೆಯಿಂದ ರಾಜ್ಯಾದ್ಯಂತ ಹೋರಾಟ ನಡೆಸಲು ಪ್ಲ್ಯಾನ್ ರೂಪಿಸಲಾಗುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಇನ್ನು ಸಿಎಂ ಮೀಸಲಾತಿ ನಿರಾಕರಿಸಿರುವುದು ಶ್ರೀಗಳು ಹಾಗೂ ಪಂಚಮಸಾಲಿ ಸಮುದಾಯದ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಸಭೆ ಮೂಲಕ ಮೀಸಲಾತಿ ಪಡೆಯಲು ನೇರವಾಗಿ ಕೇಂದ್ರ ಸರ್ಕಾರಕ್ಕೆ ಒತ್ತಡ ತರಲು ಪ್ಲ್ಯಾನ್ ರೂಪಿಸಲಾಗುತ್ತಿದೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.
ರಾಜ್ಯ ಸಚಿವರು, ಶಾಸಕರ ಮೂಲಕವೇ ಒತ್ತಡ ಹೇರಲು ಹಾಗೂ ರಾಜ್ಯದಲ್ಲಿ ಬಿಜೆಪಿಗೆ ಪಂಚಮಸಾಲಿ ಕೊಡುಗೆ ಕುರಿತು ಕೇಂದ್ರಕ್ಕೆ ಮನವರಿಕೆ ಮಾಡಿ ಮೀಸಲಾತಿ ಪಡೆಯುವ ಸಭೆ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ. ಇನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಿರಾಕರಿಸಿದರೆ ಪಂಚಮಸಾಲಿ ಮುಖಂಡರು ಪಕ್ಷದಿಂದ ದೂರ ಉಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.