ಚಿತ್ರದುರ್ಗ: ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬೇಕು ಎಂದು ಹೇಳಿ ಮನೆಯಿಂದ ಹೋದ ಯುವತಿಯ ಶವ ಶಿವಮೊಗ್ಗದಲ್ಲಿ ಪತ್ತೆಯಾಗಿದ್ದು, ಪೊಲೀಸರೇ ಮಣ್ಣು ಮಾಡಿದ್ದಾರೆ.
ಚಿತ್ರದುರ್ಗ ತಾಲೂಕು ಸಿರಿಗೆರೆ ಸಮೀಪದ ಚಿಕ್ಕೇನಹಳ್ಳಿ ಗ್ರಾಮದ ಆನಂದಪ್ಪ ಹಾಗೂ ಹನುಮಂಗಮ್ಮ ದಂಪತಿಯ ಮಗಳು ದಿವ್ಯಾ ಎಂಬುವಳ ಶವ ಶಿವಮೊಗ್ಗ ನಗರದ ಪುರ್ಲೆ ಕೆರೆಯಲ್ಲಿ ಪತ್ತೆಯಾಗಿದೆ.
ಡಿಸೆಂಬರ್ 30ರಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬೇಕು ಎಂದು ಹೇಳಿ ಮನೆಯಿಂದ ಹೊರಟ ಮಗಳು ವಾಪಸ್ ಮನೆಗೆ ಬಾರದಿದ್ದಾಗ ಹಾಸ್ಟೆಲ್ನಲ್ಲಿರಬೇಕು ಅಂದುಕೊಂಡು ಸುಮ್ಮನಾಗಿದ್ದ ಯುವತಿ ಪೋಷಕರು, ಹನ್ನೆರಡು ದಿನಗಳ ನಂತರ ಭರಮಸಾಗರ ಪೊಲೀಸ್ ಠಾಣೆಯಲ್ಲಿ ಮಗಳು ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು.
ಕಾಣೆಯಾದ ಪ್ರಕರಣ ದಾಖಲಿಸಿಕೊಂಡಿದ್ದ ಭರಮಸಾಗರ ಪೊಲೀಸರು, ದಿವ್ಯಾಳ ಮೊಬೈಲ್ ಕರೆ ಆಧರಿಸಿ ಚನ್ನಗಿರಿ ಮೂಲದ ಸ್ವಾಮಿ ಹಾಗೂ ಇನ್ನೊಬ್ಬ ಅಪ್ರಾಪ್ತನನ್ನು ವಿಚಾರಣೆ ನಡೆಸಿದಾಗ ದಿವ್ಯಾ ಶಿವಮೊಗ್ಗದ ಕಡೆ ಹೋಗಿರುವ ಮಾಹಿತಿ ಲಭಿಸಿದೆ. ಕೂಡಲೇ ಅವರ ಪೋಷಕರನ್ನ ಕರೆದುಕೊಂಡು ಶಿವಮೊಗ್ಗಕ್ಕೆ ತೆರಳಿದ ಪೊಲೀಸರಿಗೆ ಸಿಕ್ಕಿದ್ದು ದಿವ್ಯಾ ಸಾವಿನ ಸುದ್ದಿ.
ಶಿವಮೊಗ್ಗದ ಕೆರೆಯೊಂದರಲ್ಲಿ ಸಿಕ್ಕ ಅಪರಿಚಿತ ಹೆಣವನ್ನು ಪೊಲೀಸರೇ ಮಣ್ಣು ಮಾಡಿದ್ದರು. ಈ ಬಗ್ಗೆ ಮಾಹಿತಿ ತಿಳಿದು ತಾಳೆ ಮಾಡಿ ನೋಡಿದಾಗ ಅದು ದಿವ್ಯಾಳ ಶವ ಎಂಬುದಾಗಿ ತಿಳಿದುಬಂದಿದೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಸಂಬಂಧ ದಿವ್ಯಾಳ ಇಬ್ಬರು ಸ್ನೇಹಿತರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಧಿಕಾ ತಿಳಿಸಿದ್ದಾರೆ.