ಚಿತ್ರದುರ್ಗ: ಕೋವಿಡ್-19 ವೈರಸ್‌ಗೆ ಸಂಬಂಧಿಸಿದಂತೆ ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಆರೋಗ್ಯ ಸಚಿವ ಶ್ರೀರಾಮುಲು ಅಧಿಕಾರಿಗೊಂದಿಗೆ ಸಭೆ ನಡೆಸಿದರು.
ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಈವರೆಗೆ 247 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಈಗಾಗಲೇ 8 ಜನ ಸಾವಿಗೀಡಾಗಿದ್ದರೆ, 60 ಜನ ಗುಣಮುಖರಾಗಿದ್ದಾರೆ. ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆಯಲ್ಲಿ ರಾಜ್ಯ 3ನೇ ಸ್ಥಾನದಲ್ಲಿತ್ತು. ಆದರೆ ಇದೀಗ 12ಕ್ಕೆ ಇಳಿದಿದೆ ಎಂದು ಮಾಹಿತಿ ನೀಡಿದರು.
ಲಾಕ್‌ಡೌನ್‌ವಿಸ್ತರಣೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮೇ 3ರವರೆಗೆ ಲಾಕ್ಡೌನ್ ಮುಂದುವರೆಯಲಿದ್ದು, ಪ್ರಧಾನಿ ಮೋದಿ ಸೂಚಿಸಿದ ಸಪ್ತ ಸೂತ್ರ ಎಲ್ಲರೂ ಪಾಲಿಸಬೇಕು. ಹಸಿವಿನಿಂದ ಯಾರೂ ಬಳಲಬಾರದು. ಉಳ್ಳವರು ದಾನ ಮಾಡಿ, ಸರ್ಕಾರದಿಂದ ಬಡವರು, ನಿರ್ಗತಿಕರಿಗೆ ಆಹಾರದ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು. ವೈದ್ಯರು ಹೊರತುಪಡಿಸಿ ಸಾರ್ವಜನಿಕರು N-95 ಮಾಸ್ಕ್ ಧರಿಸುವ ಅಗತ್ಯವಿಲ್ಲ. ಅದರ ಬದಲಿಗೆ ಸಾರ್ವಜನಿಕರು ಬಟ್ಟೆಗಳಿಂದ ತಯಾರಿಸಿದ ಮಾಸ್ಕ್ ಧರಿಸಿ ಎಂದು ಸಲಹೆ ನೀಡಿದರು.