ಚಿತ್ರದುರ್ಗ : ರಾಜ್ಯದಲ್ಲಿ ವಿಮಾನಯಾನ ಬಂದ್ ಆದ ಬಳಿಕ ನಿಟ್ಟುಸಿರು ಬಿಟ್ಟಿದ್ದೆವು. ಆದರೆ, ದೆಹಲಿ ನಿಜಾಮುದ್ದೀನ್ ಸಭೆ ಬಳಿಕ ಆತಂಕ ಸೃಷ್ಟಿ ಆಯಿತು. ತಬ್ಲಿಘಿ ಜಮಾತ್‌ನವರನ್ನು ವಾರಿಯರ್ಸ್ ಎಂದು ಒಪ್ಪುವ ಸ್ಥಿತಿಯಲ್ಲಿ ನಾವಿಲ್ಲ ಎಂದು ಆರೋಗ್ಯ ಸಚಿವ ಶ್ರೀರಾಮುಲು ಅಭಿಪ್ರಾಯಪಟ್ಟರು.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗೌರಸಮುದ್ರ ಗ್ರಾಮದಲ್ಲಿ ಆಶಾ ಕಾರ್ಯಕರ್ತೆಯರು, ಅಂಗವಿಕಲರು ಹಾಗೂ ಗ್ರಾಮ ಪಂಚಾಯತ್‌ನ ಸ್ವಚ್ಛತಾಗಾರರಿಗೆ ದಿನಸಿ ಸಾಮಾಗ್ರಿ ಕಿಟ್ ವಿತರಿಸಿದ ಬಳಿಕ ಮಾತನಾಡಿದ ಅವರು, ಪೊಲೀಸರು, ವೈದ್ಯರು, ನರ್ಸ್, ಆಶಾ ಕಾರ್ಯಕರ್ತರು, ಪತ್ರಕರ್ತರು ಫ್ರೆಂಟ್‌ಲೈನ್ ವಾರಿಯರ್ಸ್ ಆಗಿದ್ದಾರೆ. ಜೀವದ ಹಂಗು ತೊರೆದು ಜನರ ಹಿತಕ್ಕಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಎಂಎಲ್ಸಿ ಶ್ರೀಕಂಠೇಗೌಡರು ಪತ್ರಕರ್ತರ ಮೇಲೆ ನಡೆಸಿದ ಹಲ್ಲೆ ಖಂಡನೀಯ. ಕೊರೊನಾ ಜಾಗೃತಿಯಲ್ಲಿ ಪತ್ರಕರ್ತರ ಕಾರ್ಯ ಮಹತ್ವದ್ದಾಗಿದೆ. ರಾಜ್ಯದಲ್ಲಿ ಕಡಿಮೆ ಸಂಖ್ಯೆಯ ಕೊರೊನಾ ಪಾಸಿಟಿವ್ ಬರಲು ಪತ್ರಕರ್ತರು ಕೂಡ ಕಾರಣ ಎಂದರು.
ಮದ್ಯ ಮಾರಾಟಕ್ಕೆ ಅನುಮತಿ ನೀಡುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾವುದೇ ಝೋನ್ಗಳಲ್ಲೂ ಮದ್ಯ ಮಾರಾಟಕ್ಕೆ ಅವಕಾಶ ಇಲ್ಲ. ಸಿದ್ದರಾಮಯ್ಯನವರು ಗ್ರೀನ್ ಝೋನ್‌ನಲ್ಲಿರುವ ಜಿಲ್ಲೆಯಲ್ಲಿ ಮದ್ಯ ಮಾರಾಟಕ್ಕೆ ಅನುವು ಮಾಡಿಕೊಡಿ ಎಂದಿದ್ದಾರೆ. ಆದರೆ, ಆರ್ಥಿಕ ನಷ್ಟವಾದರೂ ಪರವಾಗಿಲ್ಲ ಜೀವಹಾನಿ ಆಗಕೂಡದು. ಲಾಕ್‌ಡೌನ್ ವೇಳೆಯ ಆರ್ಥಿಕ ನಷ್ಟ ತಡೆಯುವ ಶಕ್ತಿ ನಮ್ಮ ಸರ್ಕಾರಕ್ಕಿದೆ ಎಂದರು.