ಚಿತ್ರದುರ್ಗ: ಸಿದ್ದರಾಮಯ್ಯ ಪಂಚೇಂದ್ರಿಯಗಳ ಅನುಭವದ ಮೇಲೆ ಹೇಳಿಕೆ ನೀಡಿದ್ದಾರೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದರು.
ನಗರದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಮುಂದಿನ ಅವಧಿಗೆ ರಾಜ್ಯದ ಸಿಎಂ ನಾನೇ ಎಂದು ಹೇಳಿಕೊಂಡು ಬಂದು ಅಧಿಕಾರದಿಂದ ಇಳಿದಿದ್ದಾರೆ ಎಂದು ಸಚಿವ ಈಶ್ಚರಪ್ಪ, ಸಿದ್ದರಾಮಯ್ಯಗೆ ಮಾತಿನ ಚಾಟಿ ಬೀಸಿದರು.
ಮುಂದಿನ ಅವಧಿಗೆ ಸಿದ್ದರಾಮಯ್ಯ ಸಿಎಂ ಆಗಿರ್ತಾರೆ ಅಂತಾ ಕಾಂಗ್ರೆಸ್ ನಾಯಕರಾಗಲಿ, ಅಧ್ಯಕ್ಷರಾಗಲಿ ಹೇಳಿಲ್ಲ. ಇವರೇ ಸಿಎಂ ಎಂದು ಹೇಳಿಕೊಂಡು ಸರ್ಕಾರವನ್ನು ಕೆಡವಿದರು. ಸಿದ್ದರಾಮಯ್ಯ ಬರೀ ಘೋಷಣಾ ಮುಖ್ಯಮಂತ್ರಿ ಆಗಿದ್ದರು ಎಂದು ಟಾಂಗ್ ನೀಡಿದರು. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದರೆ, ನಮ್ಮ ಸರ್ಕಾರ ಜಾರಿಗೆ ತಂದಿರುವ ಕಾನೂನುಗಳನ್ನ ತೆಗೆದು ಹಾಕುತ್ತೇವೆ ಎಂದು ತಿರುಕನ ಕನಸು ಕಾಣುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಓದಿ: ರಾಯಬಾಗ: ಹಣ್ಣು ಮಾರುತ್ತಿದ್ದ ಮಹಿಳೆ ಮೇಲೆ ಅಪರಿಚಿತನಿಂದ ಆ್ಯಸಿಡ್ ದಾಳಿ
ಇನ್ನು ಗೋ ಹತ್ಯೆ ಕಾನೂನು ವಿರೋಧಿಸುವ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರ ಮನೆಯಲ್ಲಿ ಈ ಮಾತು ಹೇಳಿದರೆ ಮನೆಯವರು ಅನ್ನ ಕೂಡ ಕೊಡುವುದಿಲ್ಲ. ರಾಜಕೀಯವಾಗಿ ಮುಸ್ಲಿಂ ಮತಗಳ ಓಲೈಕೆಗಾಗಿ ಮಾತಾಡುತ್ತಾರೆ. ಸಿದ್ದರಾಮಯ್ಯ ಎಷ್ಟು ಪಕ್ಷ ಬದಲಾವಣೆ ಮಾಡಿದ್ದಾರೆ ಎನ್ನುವುದು ನನಗಂತೂ ಗೊತ್ತಿಲ್ಲ. ಜೆಡಿಎಸ್ ಪಕ್ಷಕ್ಕೆ ಮೋಸ ಮಾಡಿ ಬಂದಿದ್ದಾರೆ. ಅಧಿಕಾರ ಸಿಗುತ್ತೆ ಅಂದರೆ ಯಾವ ಪಕ್ಷಕ್ಕೂ ಹೋಗಲು ಸಿದ್ದರಿದ್ದಾರೆ ಎಂದರು.
ಗೋ ಹತ್ಯೆ ನಿಷೇಧ ಕಾನೂನಿಗೆ ಜನ ಬೆಂಬಲಿಸುತ್ತಿದ್ದಾರೆ:
ಗೋ ಹತ್ಯೆ ಕಾಯ್ದೆ ಜನ ಒಪ್ಪಿದ್ದು, ಹಂತ ಹಂತವಾಗಿ ಗೋಮಾಂಸ ರಫ್ತು ಮಾಡುವರ ವಿರುದ್ಧ ಕ್ರಮಕ್ಕೆ ಮುಂದಾಗುತ್ತೇವೆ. ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ನಾಯಕರು ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು. ಗೋವುಗಳನ್ನ ಎಲ್ಲಿ ಸಾಕುತ್ತಾರೆ ಎಂದು ಸಿದ್ದರಾಮಯ್ಯ ಕೇಳುತ್ತಿದ್ದಾರೆ. ಗೋ ಶಾಲೆಗಳ ಆರಂಭಕ್ಕೆ ಸರ್ಕಾರ ಈಗಾಗಲೇ ತೀರ್ಮಾನ ಕೈಗೊಂಡಿದೆ. ಗೋ ಶಾಲೆ ಮಾಡುವವರಿಗೆ ಸರ್ಕಾರದಿಂದ ಎಲ್ಲ ಸವಲತ್ತುಗಳನ್ನು ಒದಗಿಸಲಾಗುವುದು. ಈ ಬಾರಿ ಗೋಹತ್ಯೆ ನಿಷೇಧ ಕಾನೂನು ತಂದಿದ್ದೇವೆ. ಬರುವ ವಿಧಾನಸಭಾ ಅಧಿವೇಶನದಲ್ಲಿ ಹೆಣ್ಣುಮಕ್ಕಳ ರಕ್ಷಣೆಗೆ ಲವ್ ಜಿಹಾದ್ ಕಾನೂನು ಜಾರಿಗೆ ತರುತ್ತೇವೆ ಎಂದು ಎಂದರು.