ಚಿತ್ರದುರ್ಗ: ರಕ್ತ ಸಂಬಂಧದಿಂದ ಮುರುಘಾಮಠವನ್ನು ಮುಕ್ತ ಮಾಡಬೇಕು ಎಂಬ ನಿರ್ಧಾರ ಮಾಡಲಾಗಿದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.
ಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಮುರುಘಾಮಠದ ಶರಣರಿಗೆ ಸಾಮಾಜಿಕ ಬದ್ದತೆಯಿದೆ, ಬದ್ದತೆಯಲ್ಲಿಯೇ ಸಂಸ್ಥೆ ಕಟ್ಟಬೇಕಿದೆ. ಒಂದು ಸಂಸ್ಥೆಯಲ್ಲಿ ಸಾವಿರಾರು ಜನ ಕೆಲಸ ಮಾಡುತ್ತಾರೆ. ಅವರ ಅವರ ಸ್ವಭಾವ ಭಿನ್ನವಾಗಿರುತ್ತವೆ. ಯಾರು ಶಿಸ್ತಿಗೆ ಅಗೌರವ ತರುವ ಕೆಲಸ ಮಾಡುತ್ತಾರೋ ಅವ್ರ ಮೇಲೆ ಶಿಸ್ತಿನ ಕ್ರಮ ಇದ್ದೇ ಇರುತ್ತದೆ ಎಂದು ಶ್ರೀಗಳು ಹೇಳಿದರು.
ಇನ್ನು ಕಳೆದ ನಾಲ್ಕು ತಿಂಗಳ ಹಿಂದೆ ಒಂದು ಗಾಳಿಸುದ್ದಿ ಬಂದಿತ್ತು. ಈಗಾಗಲೇ ಆ ವ್ಯಕ್ತಿಯ ಮೇಲೆ ಶಿಸ್ತು ಕ್ರಮ ಜರುಗಿಸಲಾಗಿದೆ. ಮತ್ತೆ ಆ ವ್ಯಕ್ತಿಯನ್ನ ಸಂಸ್ಥೆಗೆ ಸೇರಿಸಿಕೊಳ್ಳುವುದಿಲ್ಲ. ಯಾವುದೇ ಒತ್ತಡಕ್ಕೆ ಮಣೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಮಠದಿಂದ 10 ಜನರ ರಾಜೀನಾಮೆ ಪಡೆಯಲಾಗಿದೆ. ಮಠದ ಗೌರವಕ್ಕಾಗಿ ಅವರೆಲ್ಲ ಸ್ವಇಚ್ಛೆಯಿಂದ ರಾಜೀನಾಮೆ ನೀಡಿದ್ದಾರೆ. ಒಬ್ಬರು ಮಾಡಿದ ತಪ್ಪಿಗೆ ಹತ್ತಾರು ಜನರಿಗೆ ಯಾಕೆ ಶಿಕ್ಷೆ ಎಂದು ಕೂಗು ಕೇಳಿ ಬಂದಿತ್ತು. ಸದ್ಯ ರಕ್ತ ಸಂಬಂಧದಿಂದ ಮುರುಘಾ ಮಠ ದೂರವಾಗಲಿದೆ ಎಂದು ಮುರುಘಾ ಶ್ರೀ ತಿಳಿಸಿದರು.