ಚಿತ್ರದುರ್ಗ : ಭರಮಸಾಗರದ ದೊಡ್ಡಕೆರೆಗೆ ಕಾರು ಉರುಳಿ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ತಾಲೂಕಿನ ಭರಮಸಾಗರ ಗ್ರಾಮದ ಬಳಿ ನಡೆದಿದೆ.
ಗ್ರಾಮದ ದೊಡ್ಡಕೆರೆ ಏರಿ ಮೇಲೆ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದಿದೆ. ಕಗ್ಗತ್ತಲಿನಲ್ಲಿ ದಾರಿ ಕಾಣದೆ ಕಾರು ಕೆರೆಗೆ ಹರಿದಿದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೋಡಿ ರಂಗವ್ವನ ಹಳ್ಳಿಯಿಂದ ಭರಮಸಾಗರ ಕಡೆಗೆ ಬರುತ್ತಿರುವಾಗ ಈ ಘಟನೆ ನಡೆದಿದೆ ಎನ್ನಲಾಗ್ತಿದೆ. ಕೆರೆಯ ನೀರಿನ ಒಳಗೆ ಕಾರಿನ ಹೆಡ್‌ಲೈಟ್ ಉರಿಯುತ್ತಿರೋದನ್ನು ನೋಡಿದ ಸಾರ್ವಜನಿಕರು, ನೀರಿನಲ್ಲಿ ಇಳಿದು ಹಗ್ಗ ಕಟ್ಟಿ ಜೆಸಿಬಿ ಸಹಾಯದಿಂದ ಕಾರನ್ನು ಹೊರ ತೆಗೆದಿದ್ದಾರೆ. ಆದರೆ, ದುರದೃಷ್ಟವಶಾತ್ ಕಾರಿನಲ್ಲಿದ್ದ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ದೊಡ್ಡಕೆರೆ ಏರಿ ಮೇಲೆ ತಡೆಗೋಡೆ, ವಿದ್ಯುತ್ ದೀಪ ಇಲ್ಲದೇ ಇರುವುದು ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಇದನ್ನೂ ಓದಿ: 2 ಬೈಕ್ಗಳ ಮುಖಾಮುಖಿ ಡಿಕ್ಕಿ : ಸ್ಥಳದಲ್ಲಿಯೇ ಮೂವರು ಸಾವು!