ಚಿತ್ರದುರ್ಗ: ಕೋವಿಡ್-19 ಹರಡುವಿಕೆ ತಡೆಗಟ್ಟುವ ಉದ್ದೇಶದಿಂದ ದೇಶಾದ್ಯಂತ ಲಾಕ್‍ಡೌನ್ ಜಾರಿಗೊಳಿಸಲಾಗಿದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕರ ಕುಂದು ಕೊರತೆ ಆಲಿಸಿ, ಅದಕ್ಕೆ ಸೂಕ್ತ ಕ್ರಮ ಕೈಗೊಳ್ಳುವ ಉದ್ದೇಶದಿಂದ ಜಿಲ್ಲಾಧಿಕಾರಿಗಳ ಮಾರ್ಗದರ್ಶನದ ಮೇರೆಗೆ ಜಿಲ್ಲೆಯ ಎಲ್ಲಾ ಗ್ರಾಮಗಳು ಹಾಗೂ ನಗರ ಪ್ರದೇಶದ ವಾರ್ಡ್‍ಗಳಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರನ್ನು ನಿಯೋಜಿಸಲಾಗಿದೆ.
ಸಾರ್ವಜನಿಕರ ಕುಂದು ಕೊರತೆ ಆಲಿಸಲು ಶಿಕ್ಷಕರ ನಿಯೋಜನೆ ಪ್ರತೀ ಊರಿನ ಪ್ರಮುಖ ಸ್ಥಳದಲ್ಲಿ ಶಿಕ್ಷಕರು ಕುಳಿತು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವ ಕಾರ್ಯ ಏಪ್ರಿಲ್ 04 ರಿಂದ ಆರಂಭವಾಗಿದೆ. ದೂರುದಾರರ ಹೆಸರು, ಊರು, ಸಾರ್ವಜನಿಕರು ನೀಡುವ ದೂರಿನ ವಿವರ, ಸಂಬಂಧಪಟ್ಟ ಇಲಾಖೆ ಕುರಿತು ಮಾಹಿತಿಯನ್ನು ಕಲೆ ಹಾಕಲಾಗುತ್ತದೆ. ಅದರಲ್ಲಿನ ದೂರುಗಳಿಗೆ ಅನುಗುಣವಾಗಿ ಮೇಲಧಿಕಾರಿಗಳಿಗೆ ಅಹವಾಲು ರವಾನಿಸಲಾಗುತ್ತದೆ. ಆಹಾರ ಪದಾರ್ಥ ವಿತರಣೆ, ಕುಡಿಯುವ ನೀರು ಸರಬರಾಜು ಹಾಗೂ ವೈದ್ಯಕೀಯ ಸೇವೆಗಳಿಗೆ ಸಂಬಂಧಿಸಿದ ದೂರು ಸ್ವೀಕರಿಸಲಾಗುತ್ತಿದೆ.ಜಿಲ್ಲೆಯ 6 ತಾಲ್ಲೂಕಿನಲ್ಲೂ ಶಿಕ್ಷಕರನ್ನು ನೇಮಿಸಲಾಗಿದ್ದು, ಪ್ರತಿ ತಾಲ್ಲೂಕಿನಲ್ಲಿ ಸುಮಾರು 200-250 ಜನ ಶಿಕ್ಷಕರು ಕಳೆದ ಒಂದು ವಾರದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ತಮ್ಮ ವ್ಯಾಪ್ತಿಯ ಪ್ರದೇಶದ ಜನರ ಕುಂದು ಕೊರತೆಗಳನ್ನು ಸ್ವೀಕರಿಸಿ, ಸಂಬಂಧಪಟ್ಟ ಇಲಾಖೆಗೆ ಸಮಸ್ಯೆ ತಿಳಿಸುತ್ತಾರೆ. ಆಯಾ ಇಲಾಖೆಯವರು ಸೂಕ್ತ ಕ್ರಮ ಕೈಗೊಂಡು ಸಮಸ್ಯೆ ಪರಿಹರಿಸಿದ ಬಗೆ ಕುರಿತು ಶಿಕ್ಷಕರಿಗೆ ಮಾಹಿತಿ ನೀಡುತ್ತಾರೆ.