ಚಿತ್ರದುರ್ಗ: ಇಲ್ಲಿನ ಖಾಸಗಿ ಕಂಪನಿಯಲ್ಲಿ ಬರೋಬ್ಬರಿ 36 ಲಕ್ಷದ 60 ಸಾವಿರ ರೂ. ಹಣ ದೋಚಿದ ಪ್ರಕರಣ ಕೆಲ ದಿನಗಳ ಹಿಂದೆ ನಡೆದಿತ್ತು. ಈ ಪ್ರಕರಣ ತನಿಖೆಯ ಹಂತದಲ್ಲಿ ಇರುವಾಗಲೇ ಭಯಭೀತರಾದ ಕಳ್ಳರು ಕದ್ದಿದ್ದ ಹಣವನ್ನು ರಸ್ತೆಬದಿಯ ಜಮೀನಲ್ಲಿ ಬಿಸಾಡಿದ್ದರು. ಕಂತೆಕಂತೆ ಹಣ ಜಮೀನಿನಲ್ಲಿ ಬಿದ್ದಿದ್ದರೂ ಸಹ ಯಾರೊಬ್ಬರೂ ಅದರ ಹತ್ತಿರ ಸುಳಿಯದೇ ಇರುವುದು ಪೊಲೀಸರ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬುಕ್ಲೂರಹಳ್ಳಿ ಗ್ರಾಮದ ಬಳಿಯ ದಿಲೀಪ್ ಬಿಲ್ಡ್ ಕಾನ್ ಕಂಪನಿಯ ಕಚೇರಿಯಲ್ಲಿ ಕಳವಾಗಿದ್ದ 36,60,000 ಸಾವಿರ ಹಣದ ಪೈಕಿ 16,80,000 ಹಣ ಸಿಕ್ಕಿದೆ. ಇದೇ ತಿಂಗಳು 2ನೇ ತಾರೀಖಿನಂದು ರಾತ್ರಿ ಈ ಕಂಪನಿಯ ಕಚೇರಿಯಲ್ಲಿ ಕಾರ್ಮಿಕರಿಗೆ ನೀಡಲು ಇಟ್ಟಿದ್ದ ನಗದನ್ನು ಕಳ್ಳರು ದೋಚಿದ್ದರು. ಬಯ್ಯಾಪುರದಿಂದ ಚಳ್ಳಕೆರೆವರೆಗೆ (ರಾಷ್ಟ್ರೀಯ ಹೆದ್ದಾರಿ) NH1 50Aರ ಕಾಮಗಾರಿ ನಡೆಯುತ್ತಿದ್ದು, ಇಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ನೀಡುವ ಹಾಗೂ ಕಾಮಗಾರಿಗೆ ಅವಶ್ಯಕವಾಗಿರುವ ಸಾಮಗ್ರಿಗಳನ್ನು ಖರೀದಿಸುವ ಸಲುವಾಗಿ ಕಚೇರಿಯಲ್ಲಿ ಹಣ ಇರಿಸಲಾಗಿತ್ತು.
ಇದ್ದಕ್ಕಿದ್ದಂತೆ ಈ ಹಣ ಕಳವು ಆಗಿದ್ದರಿಂದ ಕಂಪನಿಯ ಸಿಬ್ಬಂದಿಗೆ ದಿಕ್ಕು ತೋಚದಂತಾಗಿತ್ತು. ಹಣ ಕಳೆದುಕೊಂಡ ಕಂಪನಿಯ ಸಿಬ್ಬಂದಿ ಈ ಕೃತ್ಯವನ್ನು ಕಂಪನಿಯಲ್ಲಿ ಕೆಲಸ ಮಾಡುವವರು ಇಲ್ಲವೇ ಹೊರಗಿನವರು ಮಾಡಿರಬಹುದೆಂದು ತಳಕು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆದರೆ ಹಣ ಕಳವಾಗಿ ಐದು ದಿನಗಳು ಕಳೆದ ಬಳಿಕ ಒಟ್ಟು ಹಣದ ಪೈಕಿ 16,80,000 ಹಣವನ್ನು ಕಳ್ಳರು ಕಂಪನಿಯ ಕೂಗಳತೆಯ ದೂರದಲ್ಲಿರುವ ಜಮೀನೊಂದರಲ್ಲಿ ಬಿಸಾಡಿ ಹೋಗಿದ್ದಾರೆ.
ಈ ಹಣವನ್ನು ಗಮನಿಸಿದ ಕಂಪನಿಯ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿ, ಹಣ ಕದ್ದ ಕಳ್ಳರನ್ನು ಪತ್ತೆ ಹಚ್ಚಬೇಕೆಂದು ಒತ್ತಾಯಿಸಿದ್ದಾರೆ.
ಹಣ ಸಿಕ್ಕ ಸ್ಥಳಕ್ಕೆ ತಳಕು ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಸ್ತೆ ಇಕ್ಕೆಲದಲ್ಲಿ ಬಿಸಾಡಿರುವ ಹಣವನ್ನು ಯಾರೂ ಮುಟ್ಟದೆ ಇರುವುದು ಪೊಲೀಸರಿಗೆ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಸದ್ಯ ಹಣ ಕದ್ದು ಮತ್ತೆ ಅರ್ಧ ಹಣವನ್ನು ವಾಪಸ್ ತಂದು ಇಡುವುದೆಂದರೆ, ಈ ಕೃತ್ಯವನ್ನು ಕಂಪನಿಯಲ್ಲಿ ಕೆಲಸ ಮಾಡುವವರೇ ಮಾಡಿದ್ದಾರೆ ಎಂಬ ಅನುಮಾನ ಸೃಷ್ಠಿಯಾಗಿದೆ.