ಚಿತ್ರದುರ್ಗ: ಆಂಧ್ರಪ್ರದೇಶದ ಗಡಿ ಭಾಗಗಳಿಗೆ ವೈನ್ ಶಾಪ್ಗಳನ್ನು ಸ್ಥಳಾಂತರ ಮಾಡಿದ್ದಕ್ಕೆ ಅಬಕಾರಿ ಇಲಾಖೆ ಡಿಸಿ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಗರಂ ಆದ ಘಟನೆ ಕೆಡಿಪಿ ಸಭೆಯಲ್ಲಿ ನಡೆಯಿತು.
ನಗರದ ಜಿಲ್ಲಾ ಪಂಚಾಯಿತಿ ಸಭಾ ಭವನದಲ್ಲಿ 2020 -21 ನೇ ಸಾಲಿನ 3 ನೇ ತ್ರೈಮಾಸಿಕ ಕೆಪಿಡಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆಂಧ್ರದ ಗಡಿಭಾಗದ ಗ್ರಾಮಗಳಿಗೆ ವೈನ್ ಶಾಪ್ ಸ್ಥಳಾಂತರಗೊಳಿಸುತ್ತಿರುವ ಕುರಿತು ಶಾಸಕ ತಿಪ್ಪಾರೆಡ್ಡಿ ಪ್ರಸ್ತಾಪ ಮಾಡಿದರು. ಚಳ್ಳಕೆರೆ ಹಾಗೂ ಮೊಳಕಾಲ್ಮೂರು ತಾಲೂಕುಗಳ ಗಡಿ ಗ್ರಾಮಗಳಲ್ಲಿ ವೈನ್ ಶಾಪ್‌ಗಳ ಸ್ಥಳಾಂತರ ಮಾಡಲು ಅಬಕಾರಿ ಇಲಾಖೆ ಅಧಿಕಾರಿಗಳು ಸಾಥ್ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಸಭೆಯಲ್ಲಿ ಸಂಸದ ನಾರಾಯಣಸ್ವಾಮಿ ಮಾತನಾಡಿ, ಗಡಿಭಾಗಗಳಲ್ಲಿ ಕುಡುಕರ ಹಾವಳಿ ಹೆಚ್ಚಾಗಿದೆ. ಗ್ರಾಮಸ್ಥರಿಗೆ ತೊಂದರೆಯಾಗುತ್ತಿದ್ದು, ಮದ್ಯ ಮಾರಾಟ ಎಗ್ಗಿಲ್ಲದೆ ಸಾಗಿದೆ. ಇದಕ್ಕೆ ಅಧಿಕಾರಿಗಳು ಕಡಿವಾಣ ಹಾಕಲು ಮುಂದಾಗುತ್ತಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಕೆಡಿಪಿ ಸಭೆಗೆ ಅಬಕಾರಿ ಇಲಾಖೆ ಡಿವೈಎಸ್ಪಿ ಶಿವ ಹರಳಯ್ಯ ಆಗಮಿಸಿದ್ದು, ಅಬಕಾರಿ ಇಲಾಖೆಯ ಡಿಸಿ ನಾಗಶಯನ ಅವರು 12 ವೈನ್ ಶಾಪ್ಗಳನ್ನು ಸ್ಥಳಾಂತರ ಮಾಡಿದ್ದಾರೆ. ಸ್ಥಳಾಂತರ ಮಾಡುವ 35 ಅರ್ಜಿಗಳು ಇಲಾಖೆಯಲ್ಲಿ ಬಾಕಿ ಉಳಿದಿವೆ ಎಂದು ಸಭೆಯಲ್ಲಿದ್ದ ಶಾಸಕರು ಅಧಿಕಾರಿಗಳ ವಿರುದ್ಧ ಸಿಡಿಮಿಡಿಗೊಂಡರು. ಅಬಕಾರಿ ಇಲಾಖೆಯ ನಾಗಶಯನ ಸಭೆಗೆ ಗೈರು ಹಾಜರಾಗಿದ್ದರು.
ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಇದಕ್ಕೆ ಪ್ರತಿಕ್ರಿಯಿಸಿ, ಮುಖ್ಯಮಂತ್ರಿಗಳೊಂದಿಗೆ ಈ ಕುರಿತು ಚರ್ಚಿಸುವವರೆಗೂ ಸ್ಥಳಾಂತರ ಮಾಡಲು ಅವಕಾಶ ನೀಡದಂತೆ ಜಿಲ್ಲಾಧಿಕಾರಿ ಕವಿತಾಗೆ ಸೂಚಿಸಿದರು. ಜೊತೆಗೆ ಇಂದಿನಿಂದ ಕಡ್ಡಾಯವಾಗಿ ಅಬಕಾರಿ ಡಿಸಿ ನಾಗಶಯನ ರಜೆಗೆ ತೆರಳುವಂತೆ ಸೂಚಿಸಿ, ನಾಗಶಯನ ಅವರ ಅಮಾನತಿಗೆ ಶಿಫಾರಸು ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಹೇಳಿದರು.