ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ವಿಳಂಬ ಕುರಿತು ಮಾಜಿ ಸಚಿವ ಸಿದ್ದರಾಮಯ್ಯ ಟ್ವೀಟ್ಗೆ ತಿರುಗೇಟು ನೀಡಿದ ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ್ ಪೂಜಾರಿ, ನಿಮ್ಮ ಮೈತ್ರಿ ಸರ್ಕಾರದಲ್ಲಿದ್ದ ಸಚಿವ ಸಂಪುಟವನ್ನು ಒಮ್ಮೆ ನೆನಪಿಸಿಕೊಳ್ಳಬೇಕು ಎಂದರು.
ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜಕಾರಣದಲ್ಲಿ ಟೀಕೆ ಮಾಡುವುದು ಸಹಜ. ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿ ಹಾಗೂ ಪರಮೇಶ್ವರ್ 14 ದಿನದ ನಂತರ ಸಂಪುಟ ರಚನೆ ಮಾಡಿದ್ದರು. ಒಂದು ತಿಂಗಳ ಕಾಲದ ನಂತರವೂ ಉಸ್ತುವಾರಿ ನೇಮಕ ಆಗಿರಲಿಲ್ಲ ಎಂದು ತಿರುಗೇಟು ನೀಡಿದರು.
ಇದೇನು ಪ್ರಜಾಪ್ರಭುತ್ವವೇ ? ಏಕಚಕ್ರಾಧಿಪತ್ಯವೇ ? : ಸಂಪುಟ ವಿಸ್ತರಣೆ ವಿಳಂಬಕ್ಕೆ ಸಿದ್ದು ತರಾಟೆ
ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿನ್ನೆ ಇಡೀ ದಿನ ಜಿಲ್ಲಾಧಿಕಾರಿಗಳ ಸಭೆ ನಡೆಸಿದ್ದಾರೆ. 30 ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಸಿಇಒಗಳ ಜೊತೆ ಚರ್ಚೆ ನಡೆಸಿದ್ದಾರೆ. ಜನ ಪರವಾಗಿದೇ ಈ ಸರ್ಕಾರ ಎಂದರು.
ರಾಜ್ಯದಲ್ಲಿ 210 ನಗರಾಡಳಿತ ಸಂಸ್ಥೆಗಳಿಗೆ ಅಧ್ಯಕ್ಷರು ನೇಮಕವಾಗಿಲ್ಲ. ಹಿಂದಿನ ಸರ್ಕಾರದ ಸಮಸ್ಯೆಯಿಂದ ಯಾರಿಗೂ ಸ್ಥಳೀಯ ಜನ ಪ್ರತಿನಿಧಿಗಳಿಗೆ ಅಧಿಕಾರ ಸಿಕ್ಕಿರಲಿಲ್ಲ. ಈ ಸಮಸ್ಯೆ ಕುರಿತು ಸಿಎಂ ಯಡಿಯೂರಪ್ಪ ಅವರ ಗಮನಕ್ಕೆ ತಂದಿದ್ದೇನೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಸುವ ಭರವಸೆಯನ್ನು ಸಿಎಂ ನೀಡಿದ್ದಾರೆ ಎಂದು ಹೇಳಿದರು.