ಚಿತ್ರದುರ್ಗ: ಪಂಚಮಸಾಲಿ ಸಮುದಾಯದ 2ಎ ಮೀಸಲಾತಿಗಾಗಿ ಹೋರಾಟದ ಬದಲಾಗಿ ಪಾದಯಾತ್ರೆ ಮಾತ್ರ ಮುಂದುವರೆಸಲಾಗುವುದು ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಜಯ ಬಸವ ಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.
ಐಮಂಗಲದಲ್ಲಿ ಶ್ರೀಗಳು ಹಾಗೂ ಪಂಚಮಸಾಲಿ ಸಮುದಾಯದ ಸಚಿವರ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶ್ರೀಗಳು, ಸಚಿವ ಸಿಸಿ ಪಾಟೀಲ, ನಿರಾಣಿ ನಮ್ಮೊಂದಿಗೆ ಮಾತನಾಡಿದ್ದಾರೆ. ಮೀಸಲಾತಿ ನೀಡುವ ಬಗ್ಗೆ ಸಿಎಂ, ಆಯೋಗಕ್ಕೆ ಆದೇಶ ನೀಡಿದ್ದಾರೆ. ಪಂಚಮಸಾಲಿ ಕುಲಶಾಸ್ತ್ರ ಅಧ್ಯಯನಕ್ಕೆ ಆದೇಶ ನೀಡಲಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಮೊದಲ ಹಂತವಾಗಿ ನಮಗೆ ಜಯವಾಗಿದೆ. ಆದೇಶ ಪತ್ರ ಕೈ ಸೇರುವವರೆಗೂ ಪಾದಯಾತ್ರೆ ನಡೆಯಲಿದೆ. ತುಮಕೂರಿನ ಸಿದ್ದಗಂಗಾ ಮಠಕ್ಕೆ ತಲುಪುವುದರೊಳಗೆ ಆದೇಶ ಕಾಪಿ ಬರಲಿ. ಜೊತೆಗೆ ಗೆಜೆಟ್ ನೋಟಿಫಿಕೇಶನ್ ಆಗಬೇಕು. ಸಮುದಾಯಕ್ಕೆ 2ಎ ಮೀಸಲಾತಿ ನೀಡಲು ರಾಜ್ಯ ಸರ್ಕಾರ ಉತ್ತಮವಾಗಿ ಸ್ಪಂದಿಸುತ್ತಿದೆ. ಸದ್ಯಕ್ಕೆ ಹೋರಾಟದ ಬದಲಾಗಿ ಪಾದಯಾತ್ರೆ ಮಾತ್ರ ನಡೆಸಲಾಗುವುದು ಎಂದರು.
ವಚನಾನಂದ ಸ್ವಾಮೀಜಿ ಮಾತನಾಡಿ, ಪಾದಯಾತ್ರೆ, ಹೋರಾಟದಿಂದ ನಾವು ತಕ್ಕ ಮಟ್ಟಿಗೆ ಯಶಸ್ಸು ಕಂಡಿದ್ದೇವೆ. ಬೇಗ ಮೀಸಲಾತಿ ಕಾನೂನು ಪ್ರಕ್ರಿಯೆ ನಡೆಸಬೇಕು. ಸಿಎಂ ನ್ಯಾಯ ಒದಗಿಸುವ ಭರವಸೆ ಇದೆ ಎಂದು ತಿಳಿಸಿದರು.
ಓದಿ: ರೈತರ ಪರ ಹೋರಾಟದ ಕಣಕ್ಕಿಳಿಯುವಂತೆ ಚಿತ್ರರಂಗ, ಸಾಹಿತಿಗಳನ್ನು ಆಹ್ವಾನಿಸಿದ ಸಿದ್ದರಾಮಯ್ಯ
ನಿಯೋಗದ ನೇತೃತ್ವ ವಹಿಸಿದ ಸಚಿವ ಸಿಸಿ ಪಾಟೀಲ ಮಾತನಾಡಿ, 2ಎ ಮೀಸಲಾತಿ ಹೋರಾಟ ಯಶಸ್ವಿಯಾಗಿದೆ. ಆದಷ್ಟು ಬೇಗ ಕಾನೂನು ಪ್ರಕ್ರಿಯೆಗಳು ನಡೆಯಲಿವೆ. ಬರುವ ಒಂದೆರಡು ದಿನಗಳಲ್ಲಿ ಮೀಸಲಾತಿ ಆದೇಶ ಮಾಡುವ ನಿರೀಕ್ಷೆ ಇದೆ ಎಂದು ತಿಳಿಸಿದರು.