ಚಿತ್ರದುರ್ಗ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತಾಳಿ ಕಟ್ಟಿದ ಗಂಡನೇ ಪತ್ನಿಯನ್ನು ಸಿಮೆಂಟ್ ಇಟ್ಟಿಗೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ನಗರದ ಕೋಟೆ ಪೋಲಿಸ್ ಠಾಣಾ ವ್ಯಾಪ್ತಿಯ ಸಂಪಿಗೆ ಶಾಲೆ ಬಳಿ ನಡೆದಿದೆ. ಇಲ್ಲಿನ ನಿವಾಸಿ ಸೈಯದ್ ಮುಬಾರಕ್ ಉನ್ನೀಸಾ (35) ಕೊಲೆಯಾದ ದುರ್ದೈವಿಯಾಗಿದ್ದಾಳೆ. ಪತಿ ಇಸ್ಲಾಯಿಲ್ ಜಬೀವುಲ್ಲಾ (39) ಕೊಲೆ ಮಾಡಿದ ಪತಿ.
ಹತ್ತು ವರ್ಷಗಳ ಹಿಂದೆ ಇವರ ಮದುವೆಯಾಗಿದ್ದು, ದಂಪತಿಗಳ ನಡುವೆ ಹಲವು ವಿಚಾರಗಳಿಗೆ ಆಗಿಂದಾಗ್ಗೆ ಜಗಳ ನಡೆಯುತ್ತಿತ್ತು. ಈ ಜಗಳ ತಾರಕಕ್ಕೇರಿ ಮುಂಜಾನೆ 3 ಗಂಟೆ ಸುಮಾರಿಗೆ ಇಸ್ಮಾಯಿಲ್ ಸಿಮೆಂಟ್ ಇಟ್ಟಿಗೆಯಿಂದ ಹಲ್ಲೆ ಮಾಡಿ ಉನ್ನೀಸಾಳನ್ನು ಕೊಂದು ಹಾಕಿದ್ದಾನೆ.
ಈ ಹಿಂದೆ ಕೋಟೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿ ರಾಜಿ ಪಂಚಾಯಿತಿ ನಡೆಸಿದ್ದರೂ ಒಳಜಗಳ ಮುಂದುವರೆದು ಇದೀಗ ಕೊಲೆಯಲ್ಲಿ ಅಂತ್ಯವಾಗಿದೆ. ಸದ್ಯ, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.