ಚಿತ್ರದುರ್ಗ: 2008ರಲ್ಲಿ ಬಿಜೆಪಿಗೆ ನಮ್ಮ ಭೋವಿ ಸಮುದಾಯ ಬೆಂಬಲಿಸಿದ್ದು, ದಕ್ಷಿಣ ಭಾರತದಲ್ಲಿ ಬಿಜೆಪಿ ಬರಲು ನಮ್ಮ ಸಮುದಾಯ ತ್ಯಾಗ ಮಾಡಿದೆ. ಸಚಿವ ಸಂಪುಟ ವಿಸ್ತರಣೆ ವೇಳೆ ಭೋವಿ ಸಮುದಾಯಕ್ಕೆ ಆದ್ಯತೆ ನೀಡುತ್ತಾರೆಂಬ ನಂಬಿಕೆ ಇದೆ ಎಂದು ಹೊಳಲ್ಕೆರೆ ಶಾಸಕ ಚಂದ್ರಪ್ಪ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಚಿವ ಸ್ಥಾನ ನೀಡುವ ವೇಳೆ ನನ್ನನ್ನು ಕಡೆಗಣಿಸುವುದಿಲ್ಲವೆಂಬ ಭರವಸೆ ಇದೆ. ನಾನೇ ಅಲ್ಲ ನಮ್ಮ ಸಮುದಾಯದಲ್ಲಿ ಯಾರಿಗೇ ಆದ್ಯತೆ ಕೊಟ್ಟರೂ ಸಂತೋಷ. ಪಕ್ಷೇತರ ಶಾಸಕರಾದ ಶಿವರಾಜ್ ತಂಗಡಗಿ, ಗೂಳಿಹಟ್ಟಿ ಶೇಖರ್, ವೆಂಕಟರಮಣಪ್ಪ ನನ್ನ ಮಾತು ಕೇಳಿ ಬಿಜೆಪಿಗೆ ಬೆಂಬಲಿಸಿದರು. ಸರ್ಕಾರ ಬರಲು ಕಾರಣರಾದ ನಮ್ಮ ಸಮುದಾಯಕ್ಕೆ ಬಿಜೆಪಿ ಅನ್ಯಾಯ ಮಾಡಲ್ಲ ಎಂಬ ಭರವಸೆ ಇದೆ ಎಂದರು.
ಇನ್ನು ಅನರ್ಹ ಶಾಸಕರ ಸಚಿವ ಸ್ಥಾನ ಕುರಿತು ಪ್ರತಿಕ್ರಿಯಿಸಿದ ಅವರು, ಅನರ್ಹ ಶಾಸಕರು ಸೋತಿದ್ದರು ಕೂಡ ಅವರಿಗೆ ಸಚಿವ ಸ್ಥಾನ ನೀಡಬೇಕು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲು ಅವರೇ ಕಾರಣರಾಗಿದ್ದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ನಮಗೆ ಹಾಗೂ ಅನರ್ಹರಾಗಿರುವವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.
ಪ್ರಧಾನಿ ಮೋದಿ ಮರುಭೂಮಿಯಲ್ಲಿ ಹಿಂದೂ ಭೂಮಿ ಕಟ್ಟಲಿ ಎಂಬ ಮಾಜಿ ಸಚಿವ ಆಂಜನೇಯ ಹೇಳಿಕೆಗೆ ಅವರು ತಿರುಗೇಟು ನೀಡಿದರು. ಆತ ಐದು ವರ್ಷ ಅಧಿಕಾರ ಅನುಭವಿಸಿದ್ದ. ಈಗ ಅಧಿಕಾರ ಕಳೆದುಕೊಂಡು ಅವನಿಗೆ ಅರಳು ಮರಳಾಗಿದೆ ಎಂದು ವ್ಯಂಗ್ಯವಾಡಿದರು.