ಚಿತ್ರದುರ್ಗ: ತಡರಾತ್ರಿ ಸುರಿದ ಗಾಳಿ-ಮಳೆಗೆ ರೈತರ ಬಾಳೆಗಿಡ, ತೆಂಗು, ಅಡಿಕೆ ಗಿಡಗಳು ನೆಲಕ್ಕುರುಳಿದ ಘಟನೆ ಹೊಸದುರ್ಗ ತಾಲೂಕಿನಲ್ಲಿ ನಡೆದಿದೆ.
ಬಾಲೆನಹಳ್ಳಿ, ಕಂಚಿಪುರ ಗ್ರಾಮದ ಬಸವರಾಜಪ್ಪ ಹಾಗೂ ರಮೇಶಪ್ಪ ಎಂಬುವರ ಅಡಿಕೆ, ಬಾಳೆ ಗಿಡಗಳು ನೆಲಕಚ್ಚಿವೆ. ಅಲ್ಲದೆ ಅಪಾರ ಪ್ರಮಾಣದ ಫಸಲಿಗೆ ಬಂದ ಬೆಳೆ ಕೈ ಸೇರದೆ ನಷ್ಟ ಅನುಭವಿಸುವಂತಾಗಿದೆ. ಅಡಿಕೆ ಮರಗಳು ಕೂಡ ಗಾಳಿಯ ಹೊಡೆತಕ್ಕೆ ತತ್ತರಿಸಿವೆ. ಇದರಿಂದಾಗಿ ಹೊಸದುರ್ಗ ತಾಲೂಕಿನ ಅನ್ನದಾತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಇನ್ನು ಜಿಲ್ಲೆಯಾದ್ಯಂತ ವರುಣನ ಆರ್ಭಟ ಮುಂದುವರೆದಿದ್ದು, ಕೆಲವೆಡೆ ಮಳೆಯ ಹೊಡೆತಕ್ಕೆ ಮಾವಿನ ಕಾಯಿಗಳು ಉದುರಿವೆ ಎನ್ನಲಾಗುತ್ತಿದೆ. ಮಳೆ ಆರ್ಭಟ ಮುಂದುವರಿಯುವ ಸಾಧ್ಯತೆಗಳು ಹೆಚ್ಚಾಗಿವೆ ಎನ್ನಲಾಗಿದೆ.