ಚಿತ್ರದುರ್ಗ: ಜಿಲ್ಲೆಯಾದ್ಯಂತ ಕಳೆದ ರಾತ್ರಿ ಭಾರೀ ಮಳೆಯಾಗಿದ್ದು, ಮಳೆಯಿಂದಾಗಿ ಹಳ್ಳಕೊಳ್ಳಗಳು ಮೈದುಂಬಿ ಹರಿಯುತ್ತಿವೆ.
ಹನಿ ನೀರಿಲ್ಲದೆ ಸೊರಗಿ ಹೋಗಿದ್ದ ಹಳ್ಳಕೊಳ್ಳಗಳು ತುಂಬಿಹರಿಯುತ್ತಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಹೊಸದುರ್ಗ ತಾಲೂಕಿನ ಗೂಳಿಹಟ್ಟಿ ಗ್ರಾಮದ ಸುತ್ತಮುತ್ತ ಸುರಿದ ಭಾರೀ ಮಳೆಯಿಂದಾಗಿ ಸಮೀಪದಲ್ಲಿರೋ ಹಿರೇಹಳ್ಳದ ಚೆಕ್ ಡ್ಯಾಂ ಕೂಡ ತುಂಬಿ ಹರಿಯುತ್ತಿದೆ.
ರಾತ್ರಿ ಸುರಿದಿರೋ ಮಳೆಗೆ ಚೆಕ್ ಡ್ಯಾಂಗಳು ಸೇರಿದಂತೆ ರಸ್ತೆಯ ತುಂಬೆಲ್ಲಾ ನೀರು ಹರಿಯುತ್ತಿರುವ ದೃಶ್ಯಗಳು ಮೊಬೈಲ್ ನಲ್ಲಿ ಸೆರೆಯಾಗಿವೆ. ಉತ್ತಮ ಮಳೆಯಾಗಿದ್ದರಿಂದ ಈ ಭಾಗದ ರೈತರಲ್ಲಿ ಸಂತಸ ಮನೆ ಮಾಡಿದೆ. ಈಗಾಗಲೇ ರೈತರು ಬಿತ್ತನೆ ಕಾರ್ಯ ಮುಗಿಸಿದ್ದರಿಂದ ಈ ಮಳೆ ರೈತರಿಗೆ ಮತ್ತಷ್ಟು ಖುಷಿ ತಂದಿದೆ.