ಚಿತ್ರದುರ್ಗ: ಕಾರ್ಮಿಕರ ದಿನಾಚರಣೆ ಅಂಗವಾಗಿ ಇಂದು ಆರೋಗ್ಯ ಇಲಾಖೆ ವತಿಯಿಂದ ಚಳ್ಳಕೆರೆ ತಾಲೂಕಿನಲ್ಲಿರುವ ಬೂಕ್ಲೂರಹಳ್ಳಿಯಲ್ಲಿ 500 ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಮಾಡಲಾಗಿದೆ.
ದಿಲೀಪ್ ಬಿಲ್ಡ್ ಕನ್ಸ್ಟ್ರಕ್ಷನ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 500 ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಮಾಡಿಸಲಾಯಿತು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಿ.ಚಿದಾನಂದಪ್ಪ, ಕಾರ್ಮಿಕರ ದಿನಾಚರಣೆ ಅಂಗವಾಗಿ ಅಲ್ಲಿರುವ ಕಾರ್ಮಿಕರಿಗೆ ಸಾಮಾಜಿಕ ಅಂತರ ಮತ್ತು ಮುಂಜಾಗೃತಾ ಕ್ರಮಗಳ ಬಗ್ಗೆ ಹಾಗೂ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಉಪಯೋಗಿಸುವುದು, ಸೋಪಿನಿಂದ, ಕೈ ತೊಳೆಯುವುದರ ಬಗ್ಗೆ ಹಾಗೂ ತಾಜಾ ಮತ್ತು ಬಿಸಿಯಾದ ಆಹಾರ ಉಪಯೋಗಿಸಬೇಕೆಂದು ತಿಳಿಹೇಳಿದರು.
60 ವರ್ಷದ ಮೇಲ್ಪಟ್ಟವರು, ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್ ಇತ್ಯಾದಿ ಕಾಯಿಲೆಯುಳ್ಳವರು ಜಾಗೃತರಾಗಿ ಎಚ್ಚರ ವಹಿಸಲು ಸೂಚಿಸಿದರು. ಎಲ್ಲರು ಪೌಷ್ಟಿಕ ಆಹಾರ ಸೇವನೆ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು ಎಂದರು.
500 ಜನ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಮಾಡಿಸಿ ರೋಗ ಲಕ್ಷಣಾಗಳಾದ ಜ್ವರ, ಶೀತ, ಕೆಮ್ಮು, ಗಂಟಲು ನೋವು, ಉಸಿರಾಟದ ತೊಂದರೆ ಇರುವವರಿಗೆ ಗಂಟಲು ದ್ರವ ಪರೀಕ್ಷಗೆ ಒಳಪಡಿಸಲು ಚಳ್ಳಕೆರೆ ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರೇಮಸುಧಾ ತಿಳಿಸಿದರು.