ಚಿತ್ರದುರ್ಗ: ಬಿಜೆಪಿಯವರು ಟೀಕೆ ಮಾಡುವುದರಲ್ಲಿ ಎತ್ತಿದ ಕೈ. ಎಲ್ಲಾ ವಿಚಾರದಲ್ಲೂ ಅವರು ಹುಳುಕು ಹುಡುಕುತ್ತಾರೆ ಎಂದು ಜಮೀರ್ ವಿಚಾರಕ್ಕೆ ಮಾಜಿ ಸಚಿವ ಆಂಜನೇಯ ಪ್ರತಿಕ್ರಿಯೆ ನೀಡಿದ್ದಾರೆ.
ಬಿಜೆಪಿಯವರು ಪ್ರಚಾರಕ್ಕೆ ಹಾತೊರೆಯುತಿದ್ದು, ಇಂತಹ ವಿಚಾರದಲ್ಲಿ ಪ್ರಚಾರ ಬೇಡ. ಪಾದರಾಯನಪುರದಲ್ಲಿ ಎಲ್ಲಿ ಏನಾಗಿದೆ ಎಂದು ಮೊದಲು ಪತ್ತೆ ಹಚ್ಚಲಿ ಎಂದ ಅವರು, ಶಾಸಕ ಜಮೀರ್ ಅಹಮದ್ ಖಾನ್ ಬಂಧಿಸುವಂತೆ ಬಿಜೆಪಿ ಒತ್ತಾಯ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಹೇಳಿಕೆಗೆ ಮಾಜಿ ಸಚಿವ ಆಂಜನೇಯ ತಿರುಗೇಟು ನೀಡಿದರು.
ಈ ಘಟನೆ ನಡೆಯುವ ಬಗ್ಗೆ ಸರ್ಕಾರಕ್ಕೆ ಮಾಹಿತಿ ಇರಲಿಲ್ಲವಾ? ಅವರ ಗುಪ್ತದಳ,ಪೊಲೀಸ್ ಏನು ಮಾಡುತ್ತಿತ್ತು.ಈ ಘಟನೆ ನಡೆಯದಂತೆ ತಡೆ ಹಿಡಿಯಬೇಕಿತ್ತು. ಈಗ ಧರ್ಮ ಧರ್ಮಗಳ ನಡುವೇ ಬಣ್ಣ ಹಚ್ಚುವ ಕೆಲಸ ಮಾಡೋದು ಬೇಡ. ಅವರನ್ನು ಬಂಧಿಸಿ,ಇವರನ್ನು ಅರೆಸ್ಟ್ ಮಾಡಿ ಅನ್ನೋದೇ ಬಿಜೆಪಿಯವರ ಕೆಲಸವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಜಿಹಾದಿಗಳನ್ನು ಎನ್ಕೌಂಟರ್ ಮಾಡಬೇಕು ಎಂಬ ಸಿಎಂ ಆಪ್ತ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ವಿನಮ್ರತೆಯಿಂದ ಜನರಲ್ಲಿ ಜಾಗೃತಿ ಮೂಡಿಸಿದರೆ ಟಿವಿಯಲ್ಲಿ ತೋರಿಸಲ್ಲ. ಏನಾದರು ಅಸಂಬದ್ಧ, ಅಸಂಸದೀಯ ಶಬ್ದಗಳನ್ನು ಮಾತನಾಡಿದ್ರೆ ಬ್ರೇಕಿಂಗ್ ಹಾಕ್ತಾರೆ. ಅದು ರೇಣುಕಾಚಾರ್ಯನಿಗೆ ಗೊತ್ತು. ಅದಕ್ಕೆ ಹೀಗೆ ಹೇಳಿದ್ದಾನೆ ಎಂದು ಲೇವಡಿ ಮಾಡಿದರು.