ಚಿತ್ರದುರ್ಗ: ಎರಡನೇ ಹಂತದ ಗ್ರಾಮ ಪಂಚಾಯತಿ ಚುನಾವಣೆಗೆ 189 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಕವಿತಾ ಮನ್ನಿಕೇರಿ ತಿಳಿಸಿದ್ದಾರೆ.
ಎರಡನೇ ಹಂತವಾಗಿ ಮೊಳಕಾಲ್ಮೂರು, ಚಳ್ಳಕೆರೆ ಹಾಗೂ ಹಿರಿಯೂರು ತಾಲೂಕುಗಳ 89 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸಲಾಗುತ್ತಿದ್ದು, 1475 ಸ್ಥಾನಗಳಿಗೆ 3827 ಅಭ್ಯರ್ಥಿಗಳು ಪೈಪೋಟಿ ನಡೆಸಲು ಚುನಾವಣಾ ಕಣದಲ್ಲಿದ್ದಾರೆ ಎಂದು ತಿಳಿಸಿದ್ದಾರೆ. ಇತ್ತ ಮೊಳಕಾಲ್ಮೂರು ತಾಲೂಕಿನ 31, ಚಳ್ಳಕೆರೆ ತಾಲೂಕಿನ 68, ಹಿರಿಯೂರು ತಾಲೂಕಿನ 90 ಸದಸ್ಯರು ಸೇರಿದಂತೆ ಒಟ್ಟು 189 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚಳ್ಳಕೆರೆ 2, ಮೊಳಕಾಲ್ಮೂರು 01 ಹಾಗೂ ಹಿರಿಯೂರು 01 ಸ್ಥಾನ ಸೇರಿದಂತೆ ಒಟ್ಟು 04 ಸ್ಥಾನಗಳಿಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿಲ್ಲ ಎಂದು ತಿಳಿಸಿದ್ದಾರೆ.
ಮೊದಲ ಹಂತದ ಚುನಾವಣೆಗೆ ಕಟ್ಟುನಿಟ್ಟಿನ ಕ್ರಮ:
ನಾಳೆ 100 ಗ್ರಾಮ ಪಂಚಾಯತಿಗಳಿಗೆ ಮೊದಲ ಹಂತದ ಚುನಾವಣೆ ನಡೆಯುತ್ತಿದ್ದು, ಈಗಾಗಲೇ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಚಿತ್ರದುರ್ಗ, ಹೊಳಲ್ಕೆರೆ ಹಾಗೂ ಹೊಸದುರ್ಗ ತಾಲೂಕುಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ. ಕೊರೊನಾ ತಡೆಗೆ ಕಡ್ಡಾಯ ಮಾಸ್ಕ್, ಸ್ಯಾನಿಟೈಸರ್ ಹಾಗೂ ದೈಹಿಕ ಅಂತರ ಕಾಯ್ದುಕೊಳ್ಳುವುದರೊಂದಿಗೆ ಸರ್ಕಾರ ವಿಧಿಸಿದ ನಿರ್ಬಂಧಗಳನ್ನು ಪಾಲಿಸುವ ಮೂಲಕ ಚುನಾವಣೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಮೊದಲ ಹಂತದ ಚುನಾವಣೆಯಲ್ಲಿ 158 ಸದಸ್ಯರು ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನೂ 100 ಗ್ರಾಮ ಪಂಚಾಯತಿಗಳ ವ್ಯಾಪ್ತಿಯ 4222 ಅಭ್ಯರ್ಥಿಗಳು ಚುನಾವಣಾ ಅಖಾಡದಲ್ಲಿದ್ದಾರೆ. ಮೊದಲ ಹಂತವಾಗಿ ನಾಳೆ ಬೆಳಿಗ್ಗೆ 07ರಿಂದ ಸಂಜೆ 05 ಗಂಟೆಯವರೆಗೂ ಮತದಾನ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ತಿಳಿಸಿದ್ದಾರೆ.