ಚಿತ್ರದುರ್ಗ : ಸರ್ಕಾರಿ ಆಸ್ಪತ್ರೆ ಅಂದರೆ, ಅದು ಬಡ, ಮಧ್ಯಮ ವರ್ಗದವರ ಪಾಲಿಗೆ ಸಂಜೀವಿನಿಯಾಗಿರಬೇಕು. ಆದರೆ, ಚಿತ್ರದುರ್ಗದ ಜಿಲ್ಲಾಸ್ಪತ್ರೆ ಬಡವರ ರಕ್ತ ಹೀರುವ ಕೇಂದ್ರವಾಗಿದ್ದು, ಅಧಿಕಾರಿಗಳ ಕಳ್ಳಾಟಕ್ಕೆ ಬ್ರೇಕ್ ಹಾಕುವವರೇ ಇಲ್ಲದಂತಾಗಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಸರ್ಕಾರದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕೋವಿಡ್ ಹಾವಳಿಯಿಂದ ಭಯಭೀತರಾಗಿರುವ ಜನ ಆ್ಯಂಟಿಜೆನ್, ಆರ್ಟಿ-ಪಿಸಿಆರ್ ಪರೀಕ್ಷೆಯಲ್ಲಿ ಸೋಂಕು ದೃಢಪಡದಿದ್ದರೂ ಸಿ.ಟಿ ಸ್ಕ್ಯಾನ್ನಲ್ಲಿ ಗೊತ್ತಾಗುತ್ತದೆ ಎಂದು ಸಿ.ಟಿ ಸ್ಕ್ಯಾನ್ ಮಾಡಿಸಲು ಮುಂದಾಗುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಸಿ.ಟಿ ಸ್ಕ್ಯಾನ್ ದುಬಾರಿ ಅಂತ ಸರ್ಕಾರಿ ಆಸ್ಪತ್ರೆಗೆ ಬಂದರೆ, ಇಲ್ಲೂ ದುಬಾರಿ ದರ ವಸೂಲಿ ಮಾಡಲಾಗ್ತಿದೆ.
ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಪ್ರತಿನಿತ್ಯ 100 ಕ್ಕೂ ಹೆಚ್ಚು ಜನರಿಗೆ ಸಿ.ಟಿ ಸ್ಕ್ಯಾನ್ ಮಾಡಲಾಗುತ್ತಿದೆ. ಒಂದೊಂದು ಸಿ.ಟಿ ಸ್ಕ್ಯಾನ್ಗೆ 2,000 ರೂಪಾಯಿ ದರ ನಿಗದಿ ಮಾಡಿ ವಸೂಲಿ ಮಾಡುತ್ತಿದ್ದಾರೆ. ಇತ್ತೀಚೆಗೆ ರಾಜ್ಯ ಸರ್ಕಾರ ಖಾಸಗಿ ಆಸ್ಪತ್ರೆ, ಲ್ಯಾಬ್ಗಳ ಸಿ.ಟಿ ಸ್ಕ್ಯಾನ್ ದರಕ್ಕೆ ಬ್ರೇಕ್ ಹಾಕಿದ್ದು, ಖಾಸಗಿ ಕೇಂದ್ರಗಳಲ್ಲಿ ಸಿ.ಟಿ ಸ್ಕ್ಯಾನ್ಗೆ 1,500 ರೂಪಾಯಿ ದರ ನಿಗದಿ ಮಾಡಿದೆ. ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಸಿ.ಟಿ ಸ್ಕ್ಯಾನ್ ಮಾಡಲಾಗುತ್ತಿದೆ ಎಂದು ಸ್ವತಃ ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ. ಆದರೆ, ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ನಿಯಮ ಬಾಹಿರವಾಗಿ ಸಾರ್ವಜನಿಕರಿಂದ ಹಣ ಪೀಕುತ್ತಿರುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಾಗಲಿ, ಸ್ಥಳೀಯ ಶಾಸಕರಾಗಲಿ, ಜಿಲ್ಲಾಡಳಿತವಾಗಲಿ ಚಕಾರವೆತ್ತದೆ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಜಿಲ್ಲಾಸ್ಪತ್ರೆಯಲ್ಲಿ ಸಿ.ಟಿ ಸ್ಕ್ಯಾನ್ಗೆ ಎಷ್ಟು ದರ ನಿಗದಿ ಮಾಡಿದ್ದಾರೆ ಎನ್ನುವ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಪಾಲಾಕ್ಷ ಅವರನ್ನು ಕೇಳಿದ್ರೆ, ಗೊತ್ತಿಲ್ಲ, 500 ರೂ. ತೆಗೆದುಕೊಳ್ಳಬಹುದು. ನನಗೂ ಅಷ್ಟು ಸರಿಯಾಗಿ ಮಾಹಿತಿ ಇಲ್ಲ. ನೀವು ಜಿಲ್ಲಾ ಸರ್ಜನ್ ಅವರನ್ನೇ ಕೇಳಬೇಕು ಎಂಬ ಹಾರಿಕೆಯ ಉತ್ತರ ಕೊಡುತ್ತಾರೆ.
ಜಿಲ್ಲಾ ಸರ್ಜನ್ ಬಸವರಾಜ್ ಅವರನ್ನು ಕೇಳಿದ್ರೆ, ಸರ್ಕಾರ, ಸಚಿವರು ಏನೋ ಉಚಿತವಾಗಿ ಸಿ.ಟಿ ಸ್ಕ್ಯಾನ್ ಮಾಡಿ ಎನ್ನುತ್ತಾರೆ. ನಾವಿಲ್ಲಿ ಹೊರಗುತ್ತಿಗೆ ಸಿಬ್ಬಂದಿ, ಟೆಕ್ನಿಶಿಯನ್ಗೆ ಸಂಬಳ ಕೊಡಬೇಕು. ಹಾಗಾಗಿ, ಶುಲ್ಕ ವಸೂಲಿ ಮಾಡುತ್ತಿದ್ದೇವೆ, ತಪ್ಪೇನು? ಎಂಬ ಉಡಾಫೆ ಉತ್ತರ ನೀಡುತ್ತಾರೆ.