ಚಿತ್ರದುರ್ಗ : ವಿದ್ಯಾರ್ಥಿನಿಯೊಬ್ಬಳು ಕಾಲೇಜಿಗೆ ಹೋಗುವಾಗ ಮತ್ತು ಬರುವಾಗ ಪುಂಡರ ಗುಂಪೊಂದು ಕಿರುಕುಳ ನೀಡಿದ್ದನ್ನು ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದ ಪುಂಡರನ್ನು ಹೊಸದುರ್ಗ ಪೊಲೀಸರು ಬಂಧಿಸಿ ಕೈಗೆ ಕೋಳ ತೊಡಿಸಿದ್ದಾರೆ.
ಹೊಸದುರ್ಗ ತಾಲೂಕಿನ ಪಾಣಿಕಿಟ್ಟದಹಳ್ಳಿ ಗ್ರಾಮದ ಮುತ್ತು (21), ಶೀರನಕಟ್ಟೆ ಗ್ರಾಮದ ಸುದೀಪ (19), ಕೋಟಿ (19), ಅಭಿ (22) ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿ ಕೈಗೆ ಕೋಳ ತೊಡಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕಳೆದ ಏಳು ದಿನಗಳಿಂದ ಆರೋಪಿಗಳಿಗಾಗಿ ಬಲೆ ಬೀಸಿ ಇಂದು ಬಂಧಿಸಿದ್ದಾರೆ. ಆರೋಪಿಗಳು ಬಂಧಿಸಿರುವ ಪೊಲೀಸ್ ಸಿಬ್ಬಂದಿಗೆ ಜಿಲ್ಲಾ ವರಿಷ್ಠಾಧಿಕಾರಿ ಜಿ. ರಾಧಿಕಾ ಅಭಿನಂದಿಸಿದ್ದಾರೆ.
ಘಟನೆ ವಿವರ : ವಿದ್ಯಾರ್ಥಿನಿ ಕಾಲೇಜಿಗೆ ಹೋಗುವಾಗ ಮತ್ತು ಬರುವಾಗ ಪುಂಡರ ಕಿರುಕುಳ ತಾಳಲಾರದೇ ಹೊಸದುರ್ಗ ತಾಲೂಕಿನ ಶೀರನಕಟ್ಟೆಯ ಕೋಡಿಹಳ್ಳಿಹಟ್ಟಿ ಗ್ರಾಮದ ಪ್ರಥಮ ಪಿಯುಸಿ ಓದುತ್ತಿದ್ದ ರಾಧಿಕಾ (17) ಎಂಬ ವಿದ್ಯಾರ್ಥಿ ಡಿಸೆಂಬರ್ 19ರಂದು ಆತ್ಮಹತ್ಯೆ ಮಾಡಿಕೊಂಡಿದ್ದಳು.
ಶೀರನಕಟ್ಟೆಯ ಮುತ್ತು, ಸುದೀಪ್, ಕೋಟಿದುರ್ಗಪ್ಪ, ಅಭಿ ವಿರುದ್ಧ ಕಿರುಕುಳದ ಆರೋಪ ಮಾಡಿದ್ದರು. ರಾಧಿಕಾ ಕಾಲೇಜಿಗೆ ಹೋಗುವಾಗ, ಬರುವಾಗ ಜಡೆ ಹಿಡಿದು ಎಳೆದು ಅಶ್ಲೀಲವಾಗಿ ಮಾತನಾಡಿ ಆರೋಪಿಗಳು ಕಿರುಕುಳ ನೀಡುತ್ತಿದ್ದರು. ಈ ಬಗ್ಗೆ ತನ್ನ ಪೋಷಕರ ಬಳಿಯೂ ರಾಧಿಕಾ ಹೇಳಿಕೊಂಡಿದ್ದಾಳು. ಈ ಬಗ್ಗೆ ಆರೋಪಿಗಳ ವಿರುದ್ಧ ರಾಧಿಕಾ ಪೋಷಕರು ಹೊಸದುರ್ಗ ಠಾಣೆಗೆ ದೂರು ನೀಡಿದ್ದರು.
ಮಗಳ ಸಾವಿಗೆ ಕಾರಣವಾದ ಪುಂಡರನ್ನು ಬಂಧಿಸುವಂತೆ ಮೃತಳಾ ಸಂಬಂಧಿಕರು ಆರೋಪಿಸಿ ಪ್ರತಿಭಟನೆ ನಡೆಸಿದ್ದರು. ಸ್ಥಳಕ್ಕೆ ಎಸ್ಪಿ ಜಿ ರಾಧಿಕಾ ಭೇಟಿ ನೀಡಿ ಪರಿಶೀಲನೆ ನಡೆಸಿ ಆರೋಪಿಗಳ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು. ಇದೀಗ ಆರೋಪಿಗಳ ಬಂಧನವಾಗಿದೆ.
ಇದನ್ನೂ ಓದಿ : ಚಿತ್ರದುರ್ಗದಲ್ಲಿ ಪುಂಡ ಯುವಕರಿಂದ ರ‍್ಯಾಗಿಂಗ್.. ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆ