ಚಿತ್ರದುರ್ಗ: ಸುಮಾರು ಎರಡು ವರ್ಷಗಳ ಹಿಂದೆ ಹಿಂದೂ ಧರ್ಮದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಅವರ ತಾಯಿ ಹಾಗೂ ನಾಲ್ಕು ಕುಟುಂಬಗಳು ಮತ್ತೆ ಹಿಂದೂ ಧರ್ಮಕ್ಕೆ ವಾಪಸ್ ಆಗಿದ್ದಾರೆ.
ಹೊಸದುರ್ಗ ತಾಲೂಕಿನ ಹಾಲು ರಾಮೇಶ್ವರ ದೇವಸ್ಥಾನದಲ್ಲಿ ಭಾನುವಾರ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಈ ಕುಟುಂಬಗಳಿಗೆ ಕೇಸರಿ ಶಾಲು ಹಾಕಿ, ತೀರ್ಥ-ಪ್ರಸಾದ, ಮಂಜುನಾಥ ಸ್ವಾಮಿ ಫೋಟೋ ನೀಡಿ ಶಾಸಕ ಗೂಳಿಹಟ್ಟಿ ಶೇಖರ್ ನೇತೃತ್ವದಲ್ಲಿ ಹಿಂದೂ ಧರ್ಮಕ್ಕೆ ಬರಮಾಡಿಕೊಳ್ಳಲಾಗಿದೆ. ಹೊಸದುರ್ಗ ತಾಲೂಕಿನ ಬಲ್ಲಾಳಸಮುದ್ರ ಗ್ರಾಮದ ನಾಲ್ಕು ಕುಟುಂಬಗಳು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದರು.
ಇತ್ತೀಚೆಗೆ ಹೊಸದುರ್ಗ ತಾಲೂಕಿನಲ್ಲಿ ಅತಿಹೆಚ್ಚು ಹಿಂದೂ ಧರ್ಮದ ಕುಟುಂಬಗಳು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದವು ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ಬಗ್ಗೆ ಕಳೆದ ತಿಂಗಳು ನಡೆದ ವಿಧಾನಸಭಾ ಅಧಿವೇಶನದಲ್ಲಿ ಶಾಸಕ ಗೂಳಿಹಟ್ಟಿ ಶೇಖರ್ ವಿಷಯ ಪ್ರಸ್ತಾಪಿಸಿ, 'ನನ್ನ ಮತ ಕ್ಷೇತ್ರದಲ್ಲಿ ಹೆಚ್ಚು ಮತಾಂತರ ನಡೆಯುತ್ತಿದೆ. ಅದರಲ್ಲೂ ನನಗೆ ಜನ್ಮ ನೀಡಿದ ತಾಯಿಯೇ ಮತಾಂತರವಾಗಿದ್ದಾರೆ' ಎಂದು ಕ್ರೈಸ್ತ ಮಿಷನರಿಗಳ ವಿರುದ್ಧ ಸಿಡಿದೆದ್ದಿದ್ದರು. ಅಧಿವೇಶನ ಮುಗಿದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಶಾಸಕ ಗೂಳಿಹಟ್ಟಿ ಶೇಖರ್ ಹೋರಾಟ ಮುಂದುವರಿಸಿದ್ದರು.
'ಘರ್ ವಾಪ್ಸಿ' ಕಾರ್ಯಕ್ರಮ!
ಶಾಸಕರ ಹೋರಾಟಕ್ಕೆ ಹಲವಾರು ಸ್ಥಳೀಯರು ಸಾಥ್ ನೀಡಿದ್ದರು. ಹೀಗಾಗಿ ಭಾನುವಾರ ಹೊಸದುರ್ಗ ತಾಲೂಕಿನ ನಾಲ್ಕು ಕುಟುಂಬಗಳನ್ನು ಹಿಂದೂ ಧರ್ಮಕ್ಕೆ ವಾಪಸ್ ಕರೆತರುವಲ್ಲಿ ಸ್ಥಳೀಯ ಶಾಸಕರು ಯಶಸ್ವಿಯಾಗಿದ್ದಾರೆ. ನಾಲ್ಕು ಕುಟುಂಬಗಳು ಹಿಂದೂ ಧರ್ಮಕ್ಕೆ ಮರಳಿ ಬಂದಿರುವುದು ಗಮನಿಸಿದರೆ ತಾಲೂಕಿನಲ್ಲಿ ಮತ್ತಷ್ಟು ಕುಟುಂಬಗಳು ಸ್ವಧರ್ಮಕ್ಕೆ ಮರಳುವ ಲಕ್ಷಣಗಳು ಗೋಚರಿಸುತ್ತಿವೆ.
ಈ ಬಗ್ಗೆ ಮಾತನಾಡಿರುವ ಶಾಸಕ ಗೂಳಿಹಟ್ಟಿ ಶೇಖರ್, ತಾಲೂಕಿನಾದ್ಯಂತ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿರುವ ಜನರನ್ನು ಹಿಂದೂ ಧರ್ಮಕ್ಕೆ ವಾಪಸ್ ಕರೆ ತರಲು ಘರ್ ವಾಪ್ಸಿ ಕಾರ್ಯಕ್ರಮ ನಡೆಸುತ್ತಿದ್ದೇನೆ ಎಂದು ಹೇಳಿದರು. ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತಗೊಂಡಿದ್ದ ನನ್ನ ತಾಯಿ ಇದೀಗ ಮರಳಿ ನಮ್ಮ ಹಿಂದೂ ಧರ್ಮಕ್ಕೆ ಬಂದಿದ್ದಾರೆ. ಅವರು ನಮ್ಮ ಮನೆಯಲ್ಲಿ ನನ್ನಮ್ಮ ಅರಾಮಾಗಿದ್ದಾರೆ ಎಂದರು.
ಗೂಳಿಹಟ್ಟಿ ಶೇಖರ್ ಕ್ಷಮೆಯಾಚನೆ..!
ಕ್ಷೇತ್ರದಲ್ಲಿ ಸಾಕಷ್ಟು ಕುಟುಂಬಗಳನ್ನು ಅನ್ಯ ಧರ್ಮಕ್ಕೆ ಮತಾಂತರ ಮಾಡುತ್ತಿರುವ ಮಿಷನರಿಗಳ ವಿರುದ್ಧ ನಾನು ಆಕ್ರೋಶ ವ್ಯಕ್ತಪಡಿಸಿದ್ದೆ. ಯಾರು ಹುಟ್ಟಿನಿಂದಲೇ ಕ್ರೈಸ್ತ ಧರ್ಮದಲ್ಲಿರುವವರ ವಿಚಾರದಲ್ಲಿ ನನಗೆ ಸೋದರತೆಯ ಭಾವವಿದೆ. ಈ ನನ್ನ ಹೋರಾಟದಿಂದ ಅವರಿಗೆ ನೋವಾಗಿದ್ದರೆ ಬಹಿರಂಗವಾಗಿ ಕ್ಷಮೆಯಾಚಿಸುತ್ತೇನೆ ಎಂದೇಳಿ ಸ್ಥಳದಲ್ಲೇ ಕ್ಷಮೆಯಾಚಿಸಿದರು. ಅಲ್ಲದೆ, ಮತಾಂತರ ವಿಚಾರ ಇಟ್ಟುಕೊಂಡು ನಾನು ಹೊಸದುರ್ಗದಲ್ಲಿ ಎಂದಿಗೂ ರಾಜಕೀಯ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: 'ನನ್ನ ತಾಯಿಯನ್ನೂ ಮತಾಂತರ ಮಾಡಿದ್ದಾರೆ..': ಅಧಿವೇಶನದಲ್ಲಿ ನೋವು ತೋಡಿಕೊಂಡ ಗೂಳಿಹಟ್ಟಿ ಶೇಖರ್