ಚಿತ್ರದುರ್ಗ: ಒಂದು ಕಡೆ ಕೊರೊನಾ ಮಹಾಮಾರಿಯಿಂದ ದೇಶದ ಜನ ಹೈರಾಣಾಗಿದ್ದು, ಇದೀಗ ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್ ಎಲ್ಲೆಡೆ ತಾಂಡವವಾಡುತ್ತಿದೆ. ಇತ್ತ ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಚರ್ಮದ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದ್ದು, ವೈದ್ಯರು ಸೇರಿದಂತೆ ಜನರಲ್ಲಿ ಭಯ ಉಂಟುಮಾಡಿದೆ.
ಓದಿ: Black fungus: ರಾಜ್ಯದಲ್ಲಿ ಕಪ್ಪು ಶಿಲೀಂಧ್ರಕ್ಕೆ 51 ಮಂದಿ ಬಲಿ
ಭಾರತದಲ್ಲಿ ಮೊಟ್ಟ ಮೊದಲ ಚರ್ಮದ ಬ್ಲ್ಯಾಕ್ ಫಂಗಸ್ ಪ್ರಕರಣ ಎನ್ನುತ್ತಿದೆ ವೈದ್ಯರ ತಂಡ. ಚಿತ್ರದುರ್ಗ ಜಿಲ್ಲೆಯಲ್ಲಿ 50 ವರ್ಷದ ರೋಗಿಯಲ್ಲಿ ಸ್ಕೀನ್ ಮ್ಯೂಕರ್ ಮೈಕೋಸಿಸ್ ಪತ್ತೆಯಾಗಿದೆ. ಒಂದು ತಿಂಗಳ ಹಿಂದೆ ಕೋವಿಡ್ ಸೋಂಕಿನಿಂದ ಗುಣಮುಖನಾಗಿದ್ದ ವ್ಯಕ್ತಿಯೊಬ್ಬ ಮಧುಮೇಹದಿಂದ ಬಳಲುತ್ತಿದ್ದು, ಆತನ ಚರ್ಮದಲ್ಲಿ ಕಪ್ಪು ಶಿಲೀಂಧ್ರ ಕಾಣಿಸಿಕೊಂಡಿದೆ.
ಆ ವ್ಯಕ್ತಿಯ ಬಲ ಭಾಗದ ಕಿವಿಯ ಸಮೀಪ ಚರ್ಮದ ಕಪ್ಪು ಶಿಲೀಂಧ್ರ ಕಾಣಿಸಿಕೊಂಡಿದೆ. ಚಿತ್ರದುರ್ಗ ನಗರದ ಕರ್ನಾಟಕ ಕಿವಿ, ಮೂಗು ಗಂಟಲು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದಲ್ಲಿ ಈ ಫಂಗಸ್ ಪತ್ತೆಯಾಗಿದೆ. ಚಿತ್ರದುರ್ಗದ ಕಿವಿ, ಮೂಗು, ಗಂಟಲು ತಜ್ಞ ಡಾ.ಎನ್.ಬಿ. ಪ್ರಹ್ಲಾದ್ ಅವರು ಶಸ್ತ್ರಚಿಕಿತ್ಸೆ ಮೂಲಕ ಬ್ಲ್ಯಾಕ್ ಫಂಗಸ್ ಆಗಿದ್ದ ಭಾಗ ತೆರವು ಮಾಡಿ, ಮೊದಲ ಹಂತದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಮಾಡಿ ಮುಗಿಸಿದ್ದಾರೆ. ಎರಡನೇ ಹಂತದ ಶಸ್ತ್ರಚಿಕಿತ್ಸೆಗೆ ಈಗ ಸಿದ್ಧತೆ ಮಾಡಿಕೊಂಡಿದ್ದಾರೆ.