ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದ ತಾಲೂಕು ಕಚೇರಿ ಎದುರು ಬೆಳೆ ವಿಮೆ ಹಾಗೂ ಬೆಳೆ ಪರಿಹಾರಕ್ಕೆ ಒತ್ತಾಯಿಸಿ ರೈತರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.
ತಾಲೂಕು ಕಚೇರಿ ಮುಂದೆ ಜಮಾಯಿಸಿದ ರೈತರು ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಹಿರಿಯ ಉಪಾಧ್ಯಕ್ಷ ಕೆ.ಪಿ ಭೂತಯ್ಯ ನೇತೃತ್ವದಲ್ಲಿ ಬೆಳೆ ವಿಮೆ, ಬೆಳೆ ಪರಿಹಾರಕ್ಕಾಗಿ ಪ್ರತಿಭಟಿಸಿ ಸರ್ಕಾರಕ್ಕೆ ಒತ್ತಾಯಿಸಿದರು. ಇನ್ನೂ ರೈತರಿಗೆ ಬೆಳೆ ವಿಮೆ ನೀಡದೇ ವಿಳಂಬ ಧೋರಣೆ ಅನುಸರಿಸುವುದನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾ ಸ್ಥಳಕ್ಕೆ ಕೃಷಿ ಇಲಾಖೆಯ ಅಧಿಕಾರಿಗಳು, ಶಾಸಕರು ಆಗಮಿಸುವಂತೆ ಹೋರಾಟಗಾರರು ಪಟ್ಟು ಹಿಡಿದರು. ಇದೇ ಸಂದರ್ಭದಲ್ಲಿ ಐಸಿಐಸಿಐ ಬ್ಯಾಂಕ್ ವತಿಯಿಂದ ರೈತರಿಗೆ ಸಾಲ ಮರುಪಾವತಿ ಮಾಡುವಂತೆ ಕಳಿಸಿದ ನೋಟಿಸ್ಗಳನ್ನು ಸುಟ್ಟು ಹಾಕಿ ಅಕ್ರೋಶ ವ್ಯಕ್ತಪಡಿಸಿದರು.
ಬಳಿಕ ಪ್ರತಿಭಟನ ಸ್ಥಳಕ್ಕೆ ಶಾಸಕ ಟಿ.ರಘುಮೂರ್ತಿ, ಉಪವಿಭಾಗಾಧಿಕಾರಿ ಪ್ರಸನ್ನಕುಮಾರ್, ಜಂಟಿ ಕೃಷಿ ನಿರ್ದೇಶಕ ಸದಾಶಿವ, ತಹಶೀಲ್ದಾರ್ ಮಲ್ಲಿಕಾರ್ಜುನ ಭೇಟಿ ನೀಡಿ ತುರ್ತಾಗಿ ರೈತರಿಗೆ ಬೆಳೆ ವಿಮೆ ಖಾತೆಗೆ ಜಮೆ ಮಾಡಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯನ್ನು ಹಿಂಪಡೆದರು.