ಚಿತ್ರದುರ್ಗ: ಇದು ತಂತ್ರಜ್ಞಾನ ಯುಗ. ಅತ್ಯಾಧುನಿಕ ಜೀವನ ಶೈಲಿಗೆ ಒಳಗಾಗಿ ಜನರು ತಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಂಡಿದ್ದಾರೆ. ಆದರೆ ಇಲ್ಲೊಂದು ಕುಟುಂಬ ಕಳೆದ 20 ವರ್ಷಗಳಿಂದ ಸೈಕಲ್ ತುಳಿದು ಜೀವನ ನಿರ್ವಹಣೆ ಮಾಡುವುದರ ಜೊತೆಗೆ ಸಾರ್ವಜನಿಕರಲ್ಲಿ ಪರಿಸರ ಪ್ರೇಮವನ್ನು ಬೆಳೆಸುತ್ತಿದೆ.
ಹೌದು, ತಂತ್ರಜ್ಞಾನ ಬೆಳವಣಿಗೆ ಹೊಂದುತ್ತಿದ್ದಂತೆಯೇ ಜನರು ಕೂಡ ತಮ್ಮ ಜೀವನಶೈಲಿ ಬದಲಾಯಿಸಿಕೊಂಡಿದ್ದಾರೆ. ಒಂದು ಹೆಜ್ಜೆ ಮುಂದೆ ಇಡಲು ಬೈಕ್ ಹಾಗೂ ಕಾರುಗಳನ್ನು ಅವಲಂಬಿಸಿದ್ದಾರೆ. ಆದರೆ ಎಲ್ಲರಿಗೂ ಮಾದರಿ ಎನ್ನುವಂತೆ ಕೋಟೆನಾಡು ಚಿತ್ರದುರ್ಗದ ತಳಬಾಳು ನಗರದ ನಿವಾಸಿಯೊಬ್ಬರು ಕಳೆದ 20 ವರ್ಷಗಳಿಂದ ಪರಿಸರ ಪ್ರೇಮಕ್ಕಾಗಿ ಮೋಟರ್ ಸೈಕಲ್, ಕಾರು ಖರೀದಿಸದೆ ಸಾಂಪ್ರದಾಯಿಕ ಸೈಕಲ್ ಮೇಲೆ ಓಡಾಟ ನಡೆಸುತ್ತಿದ್ದಾರೆ. ಇವರ ಪ್ರೇರಣೆಗೊಳದಾಗ ಕುಟುಂಬಸ್ಥರು ಕೂಡ ನಿತ್ಯ ಸೈಕಲ್ ಉಪಯೋಗ ಮಾಡುತ್ತಿದ್ದಾರೆ. ಜನರಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ಕೆ ಇವರು ಮುಂದಾಗಿದ್ದಾರೆ.
ಡಾ. ಹೆಚ್.ಕೆ.ಎಸ್.ಸ್ವಾಮಿ ಕಳೆದ 20 ವರ್ಷಗಳಿಂದ ಸೈಕಲ್ ತುಳಿದುಕೊಂಡು ಜೀವನ ನಡೆಸುತ್ತಿದ್ದಾರೆ. ನಗರ ನಿವಾಸಿಗಳು ಇವರನ್ನು ಪರಿಸರ ಸ್ವಾಮಿ ಎಂದೇ ಗುರುತಿಸುತ್ತಿದ್ದಾರೆ. ಇವರ ಇಬ್ಬರು ಹೆಣ್ಣು ಮಕ್ಕಳು ಕೂಡ ತಂದೆಯ ಪ್ರೇರಣೆಗೊಳಗಾಗಿ ಶಾಲಾ-ಕಾಲೇಜುಗಳಿಗೆ ಹಾಗೂ ಬೇರೆಡೆ ಹೋಗಲು ಸೈಕಲ್ ಮೂಲಕ ಹೋಗುತ್ತಾರೆ. ಅಲ್ಲದೆ ಸಾರ್ವಜನಿಕರು ಬಳಕೆ ಮಾಡಿ ಎಸೆದ ವಸ್ತುಗಳನ್ನು ಬಳಕೆ ಮಾಡಿಕೊಂಡು ಮೋಟಾರ್ ಸೈಕಲ್ ಹಾಗೂ ಕಾರುಗಳ ಬಳಕೆ ಕಡಿಮೆ ಮಾಡಿ ಪರಿಸರ ಉಳಿಸುವಂತೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಹೆಣ್ಣು ಮಕ್ಕಳಿಂದ ಶಾಲಾ-ಕಾಲೇಜುಗಳಲ್ಲಿ ಜಾಗೃತಿ:
ಡಾ. ಹೆಚ್.ಕೆ.ಎಸ್.ಸ್ವಾಮಿ ಅವರ ಇಬ್ಬರು ಹೆಣ್ಣು ಮಕ್ಕಳು ಕೂಡ ನಿತ್ಯವೂ ಸೈಕಲ್ ತುಳಿದುಕೊಂಡು ಶಾಲಾ-ಕಾಲೇಜುಗಳಿಗೆ ಹೋಗುತ್ತಾರೆ. ವಾಹನಗಳ ಬಳಕೆಯಿಂದ ಸಮಾಜಕ್ಕೆ ಆಗುತ್ತಿರುವ ನಷ್ಟ ಹಾಗೂ ಸೈಕಲ್ ತುಳಿದುವುರಿಂದ ಆಗುವ ಲಾಭದ ಕುರಿತಾಗಿ ತಮ್ಮ ಸಹಪಾಠಿಗಳಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಿಕೊಂಡು ಬಂದಿದ್ದಾರೆ.
ಪರಿಸರ ಪ್ರೇಮಕ್ಕಾಗಿ ಶಿಕ್ಷಕ ವೃತ್ತಿ ತೊರೆದ ಹೆಚ್.ಕೆ.ಎಸ್.ಸ್ವಾಮಿ:
ಡಾ. ಹೆಚ್.ಕೆ.ಎಸ್.ಸ್ವಾಮಿ ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಪರಿಸರ ಸಂರಕ್ಷಣೆ ಹಾಗೂ ಸಮಾಜ ಆರೋಗ್ಯಯುತವಾಗಿ ಸದೃಢವಾಗಿ ಇರಬೇಕು ಎಂದು ಶಿಕ್ಷಕ ವೃತ್ತಿಗೆ ವಿದಾಯ ಹೇಳಿ ಸಾಮಾಜಿಕ ಜಾಗೃತಿ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಗಾಂಧಿ ತತ್ವಕ್ಕೆ ಒಳಗಾಗಿ 30 ವರ್ಷಗಳಿಂದ ಕುಟುಂಬದವರು ಖಾದಿ ಬಟ್ಟೆ ಬಳಸುತ್ತಿದ್ದಾರೆ. ಅಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಕೈ ಬರಹಗಳ ಮೂಲಕ ಪರಿಸರ ಪಾಲನೆ ಹಾಗೂ ಸೈಕಲ್ ಬಳಕೆ ಮಾಡುವಂತೆ ಕೈ ಬರಹ ಫಲಕ ಅಳವಡಿಕೆ ಮಾಡಿ ಪೆಟ್ರೋಲ್ ಮುಕ್ತ ಭಾರತದ ಕನಸು ಹೊತ್ತಿದ್ದಾರೆ.
ಸೈಕಲ್ನಲ್ಲಿ ಸಂಚರಿಸಿ ಜಾಗೃತಿ:
ಪರಿಸರ ಸ್ವಾಮಿ ತಮ್ಮ ಇಬ್ಬರು ಹೆಣ್ಣು ಮಕ್ಕಳೊಂದಿಗೆ ನಗರದ ವಿವಿಧ ಬಡಾವಣೆಗಳಿಗೆ ಸೈಕಲ್ ಮೂಲಕ ಸಂಚರಿಸಿ, ಕೊರೊನಾ ಜಾಗೃತಿ, ಪರಿಸರ ಪ್ರೇಮ ಹಾಗೂ ಸೈಕಲ್ ಬಳಕೆ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಜೊತೆಗೆ ಝೆರಾಕ್ಸ್ ಅಂಗಡಿಗಳಲ್ಲಿ ಬಳಕೆ ಮಾಡಿ ಎಸೆದ ಪೇಪರ್ ತಂದು ಅವುಗಳ ಮೇಲೆ ಕೈ ಬರಹ ಬರೆದು ಸಾರ್ವಜನಿಕ ಸ್ಥಳದಲ್ಲಿ ಅಂಟಿಸಿ ಸಾರ್ವಜನಿಕರಿಗೆ ತಿಳಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಡಾ. ಹೆಚ್.ಕೆ.ಎಸ್.ಸ್ವಾಮಿಯವರ ಸಾಮಾಜಿಕ ಜಾಗೃತಿ ಕಂಡ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನಗರ ನಿವಾಸಿಗಳು ಇವರನ್ನು ಡಾ. ಪರಿಸರ ಸ್ವಾಮಿ ಎಂದು ಕರೆಯುತ್ತಾರೆ. ಅಲ್ಲದೆ ಕೆಲವು ಜನರು ತಮ್ಮ ಬಿಡುವಿನ ಸಮಯದಲ್ಲಿ ಇವರ ಕಾರ್ಯಕ್ಕೆ ಸಾಥ್ ನೀಡುತ್ತಾರೆ.