ಚಿತ್ರದುರ್ಗ: ಇವರ ಹೆಸರು ಶಂಭುಲಿಂಗೇಶ್. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಗೌನಹಳ್ಳಿಯ ನಿವಾಸಿ. ಓದಿದ್ದು ಐಟಿಐ. ವಿದ್ಯಾಭ್ಯಾಸದ ನಂತರ ಉದ್ಯೋಗ ಅರಸಿ ಸಿಲಿಕಾನ್ ಸಿಟಿಗೆ ತೆರಳಿದ್ರು. ಅದ್ಯಾಕೋ ಏನೋ ಮನಸ್ಸು ಮತ್ತೆ ಊರಿನತ್ತ ಹೊರಳಿತ್ತು. ಕೃಷಿ ಮಾಡು ಅಂತ ಕೈ ಬೀಸಿ ಕರೀತು. ಇಷ್ಟಾಗಿದ್ದೇ ತಡ. ಶಂಭು ಬೆಂಗಳೂರಿಗೆ ಬೈ ಹೇಳಿ ಊರಿಗೆ ವಾಪಸ್ ಆದ್ರು. ಇಲ್ಲೋ ಮಳೆ ಇಲ್ಲದೇ ಬರಗಾಲ. ಇಲ್ಲೇನಪ್ಪ ಮಾಡೋದು ಅಂತ ಯೋಚ್ನೇ ಮಾಡ್ದಾಗ ಹೊಳೆದಿದ್ದೇ ಬಾಳೆ ಬೆಳೆಯುವ ಐಡಿಯಾ. ಹೌದು ಇವತ್ತು ಸಮೃದ್ಧಿಯಾಗಿ ಬಾಳೆ ಬೆಳೆದು ಸುಂದರ ಬದುಕು ಕಟ್ಟಿಕೊಂಡಿದ್ದಾರೆ ಶಂಭುಲಿಂಗೇಶ್.
ಮಹಾನಗರ ತೊರೆದು ಸ್ವಗ್ರಾಮಕ್ಕೆ ಮರಳಿದ ಶಂಭುಲಿಂಗೇಶ್ ತಮ್ಮ ಪಿತ್ರಾರ್ಜಿತ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಿ ಬರುವಂತಹ ನೀರಿನಲ್ಲಿ ಅಡಿಕೆ, ಬಾಳೆ ಗಿಡಗಳನ್ನು ನೆಟ್ಟಿದ್ದಾರೆ. ಅಲ್ಲದೇ ಸಾವಯವ ಕೃಷಿ ಮೂಲಕ ಸಮೃದ್ದವಾಗಿ ಬೆಳೆ ತೆಗೆಯುತ್ತಿದ್ದಾರೆ. ಎರಡು ಎಕರೆ ಪ್ರದೇಶದಲ್ಲಿ 2,150 ಪಚ ಬಾಳೆ, 1ಸಾವಿರ ಪುಟ್ಬಾಳೆ ಗಿಡಗಳನ್ನು ನೆಟ್ಟಿದ್ದಾರೆ ಒಂದೊಂದು ಬಾಳೆ ಗೊನೆಯಿಂದ 35 ರಿಂದ 40 ಕೆಜಿಗೂ ಅಧಿಕ ಇಳುವರಿ ಪಡೆಯುವುದರ ಜೊತೆಗೆ ಲಕ್ಷಕ್ಕೂ ಅಧಿಕ ಲಾಭದ ಕನಸು ಕಾಣುತ್ತಿದ್ದಾರೆ. ಇನ್ನು ಭದ್ರಾ ನೀರು ಬಂದರೆ ನಮಗೆ ಹೆಚ್ಚಿನ ಅನುಕೂಲವಾಗಲಿದೆ. ಅಲ್ಲದೇ ಯುವಕರು ಕೃಷಿ ಕಡೆ ಹೆಚ್ಚಿನ ಗಮನಹರಿಸಿ ಎನ್ನುತ್ತಾರೆ ಶಂಭುಲಿಂಗೇಶ್ .
ಇದೀಗ ಫುಲ್ ಟೈಂ ರೈತನಾಗಿರುವ ಶಂಭು ಮೂರು ಎಕರೆ ಭೂಮಿಯಲ್ಲಿ ಲಾಭದಾಯಕ ಬಾಳೆಯನ್ನು ಬೆಳೆದು ಲಾಭಗಳಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಒಟ್ನಲ್ಲಿ ಕೆಲಸ ಸಿಗ್ತಿಲ್ಲ ಅಂತ ಕೊರಗುವ ಯುವಕರ ನಡುವೆ ಶಂಭುಲಿಂಗೇಶ್ ಗಮನ ಸೆಳೆದಿದ್ದಾರೆ.