ಚಿತ್ರದುರ್ಗ: ದಿವಂಗತ ನಟ ಡಾ. ವಿಷ್ಣುವರ್ಧನ್ ಅವರ ಹುಟ್ಟುಹಬ್ಬವನ್ನು ನಿನ್ನೆ ರಾಜ್ಯಾದ್ಯಂತ ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದರು. ಅದೇ ರೀತಿ ಚಿತ್ರದುರ್ಗದಲ್ಲೂ ಅಭಿಮಾನಿಯೊಬ್ಬರು ತಮ್ಮದೇ ರೀತಿಯಲ್ಲಿ ನೆಚ್ಚಿನ ನಟನ ಜನ್ಮದಿನ ಆಚರಿಸಿ ಗಮನ ಸೆಳೆದಿದ್ದಾರೆ.
ಡಾ.ವಿಷ್ಣುವರ್ಧನ್ 71 ನೇ ಜನ್ಮದಿನದ ಅಂಗವಾಗಿ ಜಿಲ್ಲೆಯ ಹಿರಿಯೂರು ನಗರದ ಅಭಿಮಾನಿಯೊಬ್ಬ 101 ಕೆಜಿ ಕೇಕ್ ಕತ್ತರಿಸಿ ಸಾಹಸ ಸಿಂಹನ ಹುಟ್ಟುಹಬ್ಬ ಆಚರಿಸಿದ್ದಾನೆ. ಹಿರಿಯೂರಿನಲ್ಲಿ ಜೂನಿಯರ್ ವಿಷ್ಣುವರ್ಧನ್ ಎಂದೇ ಕರೆಸಿಕೊಳ್ಳುವ ರಿಯಾಜ್ ವಿಷ್ಣುವರ್ಧನ್ ಪ್ರತಿವರ್ಷ ವಿಷ್ಣುದಾದಾ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುತ್ತಾರೆ.
ಈ ಬಾರಿ 101 ಕೆಜಿ ಕೇಕ್ನಲ್ಲಿ 30 ಕೆಜಿಯನ್ನು ಚಿತ್ರದುರ್ಗ ನಗರದ ಅಭಿಮಾನಿಗಳಿಗೆ ಕಳಿಸಿದ್ದು, ಉಳಿದ 71 ಕೆಜಿ ಕೇಕ್ ಅನ್ನು ಹಿರಿಯೂರಿನಲ್ಲಿ ಹಂಚಲಾಗಿದೆ. ಅಷ್ಟೇ ಅಲ್ಲದೆ, ರಿಯಾಜ್ ಚಿಕ್ಕದಾದ ಬಿರಿಯಾನಿ ಹೋಟೆಲ್ ನಡೆಸುತ್ತಿದ್ದು, ಸಾಹಸ ಸಿಂಹನ ಹುಟ್ಟುಹಬ್ಬವನ್ನು ತಮ್ಮ ಚಿಕ್ಕ ಹೋಟೆಲ್ನಲ್ಲಿ ಬಾಳೆ ಕಂದು, ಶಾಮಿಯಾನ, ಅಲಂಕಾರದೊಂದಿಗೆ ಅದ್ಧೂರಿಯಾಗಿ ಆಚರಿಸಿದರು.
ಕಾರ್ಯಕ್ರಮದಲ್ಲಿ ರಿಯಾಜ್ ಕುಟುಂಬಸ್ಥರು ಸೇರಿದಂತೆ ನೂರಾರು ಅಭಿಮಾನಿಗಳು ಭಾಗವಹಿಸಿದ್ದರು. ಈ ವೇಳೆ ದಾದಾನ ಹಲವಾರು ಅಭಿಮಾನಿಗಳು ಜೂನಿಯರ್ ವಿಷ್ಣುವರ್ಧನ್ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದ ದೃಶ್ಯ ಕಂಡುಬಂತು.