ಚಿತ್ರದುರ್ಗ: ಮನಸ್ಸಿದ್ದರೆ ಮಾರ್ಗ ಎನ್ನುವ ಮಾತು ಈ ವಿಶೇಷಚೇತನ ವ್ಯಕ್ತಿಗೆ ಹೇಳಿ ಮಾಡಿಸಿದಂತಿದೆ. ಅಂಗವಿಕತೆಯನ್ನು ಮೆಟ್ಟಿ ನಿಂತು, ತಾನು ಯಾರಿಗೂ ಕಮ್ಮಿ ಇಲ್ಲವೆಂಬಂತೆ ಬಯಲು ಸೀಮೆಯಲ್ಲಿ ಬಂಗಾರದ ಬೆಳೆ ಬೆಳೆದಿದ್ದಾರೆ.
ಚಿತ್ರದುರ್ಗದ ಹಿರಿಯೂರು ತಾಲೂಕಿನ ಸೂರಪ್ಪನಹಟ್ಟಿ ಗ್ರಾಮದ ಬಾಲಣ್ಣ, ಬಯಲು ಸೀಮೆ ನೆಲದಲ್ಲಿ ಬಂಗಾರದ ಬೆಳೆ ಬೆಳೆದು ಇತರರಿಗೆ ಮಾದರಿಯಾಗಿದ್ದಾರೆ. ತನ್ನೆರಡು ಕಾಲುಗಳು ಸ್ವಾಧೀನದಲ್ಲಿ ಇಲ್ಲದಿದ್ದರೂ, ತಾನೇ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ದುಡಿಯುತ್ತಿದ್ದಾರೆ. ಯಾರ ಸಹಾಯವಿಲ್ಲದೇ ಸ್ವಂತ ದುಡಿಮೆ ಮಾಡಿ, ಲಕ್ಷಾಂತರ ರೂ. ಆದಾಯ ಸಂಪಾದನೆ ಮಾಡುತ್ತಿದ್ದಾರೆ.
ಕಳೆದ 15 ವರ್ಷಗಳ ಹಿಂದೆ ಬಾಲಣ್ಣ, ಖಾಸಗಿ ಕಾರ್ಖಾನೆಯಲ್ಲಿ ದಿನಗೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಆ ಸಮಯದಲ್ಲಿ ಅವರ ಕಾಲುಗಳ ಮೇಲೆ ಮೂಟೆ ಬಿದ್ದು, ಎರಡು ಕಾಲುಗಳ ಸ್ವಾಧೀನ ಕಳೆದುಕೊಳ್ಳುವಂತೆ ಆಯಿತು. ಕಾರ್ಖಾನೆಯಲ್ಲಿ ಆದ ಅವಘಡದಿಂದ ಬಂದ ಪರಿಹಾರ ಹಣದಿಂದ, ಬಾಲಣ್ಣ ಇರುವ 1 ಎಕರೆ ಬರಡು ಜಮೀನಲ್ಲಿ ಕೊಳವೆ ಬಾವಿ ಕೊರೆಸಿ, ತರಕಾರಿ ಬೆಳೆಯಲು ಆರಂಭಿಸಿದ್ದಾರೆ.
ಮಿಡಿ ಸವತೇಕಾಯಿ, ಮೆಣಸಿನಕಾಯಿ, ರಾಗಿ ಹಾಗೂ ಇತರೆ ತರಕಾರಿ ಬೆಳೆದು ಇಂದು ಎಲ್ಲರಿಗೂ ಮಾದರಿಯಾಗಿದ್ದಾರೆ. ಜೊತೆಗೆ ಆಡು ಸಾಕಾಣಿಕೆ ಮಾಡಿ ಲಕ್ಷಾಂತರ ಆದಾಯ ಗಳಿಸುತ್ತಿದ್ದಾರೆ.
ಉತ್ತಮ ಫಸಲು ಬೆಳೆದು ಇಡೀ ಗ್ರಾಮದ ಜನತೆ ಹುಬ್ಬೇರಿಸಿ ನೋಡುವಂತೆ ಮಾಡಿದ ಬಾಲಣ್ಣ, ತನ್ನ ಪತ್ನಿ ಹಾಗೂ ಮಗನೊಂದಿಗೆ ತ್ರಿಚಕ್ರ ಸೈಕಲ್ ಮೂಲಕ ಜಮೀನಿಗೆ ಆಗಮಿಸುತ್ತಾರೆ. ಬೆಳೆಗೆ ಕಳೆ ತಗೆಯುವುದು, ನೀರು ಹಾಯಿಸುವುದು ಹಾಗೂ ಗೊಬ್ಬರ ಹಾಕುವ ಕೆಲಸ ಸೇರಿದಂತೆ ಎಲ್ಲವನ್ನೂ ತಾವೇ ಮಾಡುತ್ತಾರೆ. ಕೃಷಿಯಿಂದ ಬದುಕು ಹಸನಾಗಿದ್ದು, ವ್ಯವಸಾಯ ಮಾಡಿ ಮಗನ ಶಿಕ್ಷಣ ನೆರವಾಗಲು ಬಾಲಣ್ಣ ಹಂಬಲಿಸಿದ್ದಾರೆ..