ಚಿತ್ರದುರ್ಗ: ಕೋಟೆನಾಡಿನಲ್ಲಿ ತಯಾರಾಗುವ ಪರಿಸರ ಸ್ನೇಹಿ ಗಣೇಶ ಮೂರ್ತಿಗಳು ಅಮೆರಿಕ ಹಾಗೂ ಆಸ್ಟ್ರೇಲಿಯಾ ದೇಶಗಳಲ್ಲೂ ಹೆಸರುವಾಸಿ. ಕೊರೊನಾದಿಂದ ಈ ಬಾರಿ ಗಣೇಶ ಮೂರ್ತಿಗಳು ವಿದೇಶಗಳಿಗೆ ರಫ್ತಾಗಿಲ್ಲ. ಹೀಗಾಗಿ ಮೂರ್ತಿ ತಯಾರಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹಿಂದೂ ಗಣೇಶೋತ್ಸವಕ್ಕೆ ಖ್ಯಾತಿಗಳಿಸಿರುವ ಚಿತ್ರದುರ್ಗದಲ್ಲಿ ಈ ಬಾರಿ ಹಬ್ಬ ಸಪ್ಪೆಯಾಗಿದೆ. ಕೊರೊನಾ ಹಿನ್ನೆಲೆ, ಸರ್ಕಾರ ಸಾಕಷ್ಟು ಮಾರ್ಗಸೂಚಿಗಳನ್ನು ಹೊರಡಿಸಿದೆ. ಜೊತೆಗೆ ನಾಲ್ಕು ಅಡಿಗಿಂತ ಹೆಚ್ಚಿರುವ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವುದಕ್ಕೆ ಜಿಲ್ಲಾಡಳಿತ ನಿಷೇಧ ಹೇರಿದೆ. ಹೀಗಾಗಿ ಗಣೇಶ ಮೂರ್ತಿಗಳ ಬೇಡಿಕೆಯೂ ಕುಸಿದಿದೆ.
ನಗರದ ದೊಡ್ಡಪೇಟೆಯ ನಿವಾಸಿಯಾದ ಸಿದ್ದೇಶ್ ಮೂವತ್ತೈದು ವರ್ಷಗಳಿಂದ ತಯಾರಿಸುತ್ತಿರುವ ಪರಿಸರ ಸ್ನೇಹಿ ಗಣೇಶ ಮೂರ್ತಿಗಳು ಪ್ರತಿವರ್ಷ ದೇಶ-ವಿದೇಶಗಳಿಗೆ ರವಾನೆಯಾಗುತ್ತಿದ್ದವು. ಕೊರೊನಾ ವೈರಸ್ ಹಿನ್ನೆಲೆ, ಈ ಬಾರಿ ಯಾವುದೇ ಗಣೇಶ ಮೂರ್ತಿಗಳು ವಿದೇಶಕ್ಕೆ ರಫ್ತಾಗಿಲ್ಲ. ಇದು ಮಾರಾಟಗಾರರನ್ನು ಚಿಂತೆಗೀಡು ಮಾಡಿದೆ.
ಪರಿಸರ ಸ್ನೇಹಿ ಮೂರ್ತಿಗಳಿಗೆ ವಿದೇಶಗಳನ್ನು ಹೊರತುಪಡಿಸಿ, ಬಳ್ಳಾರಿ, ದಾವಣಗೆರೆ, ಚಳ್ಳಕೆರೆ, ಹೊಸದುರ್ಗ, ಹೊಳಲ್ಕೆರೆ ಸೇರಿ ಮುಂತಾದ ಪ್ರದೇಶಗಳಿಂದ ಬೇಡಿಕೆ ಇರುತ್ತಿತ್ತು. ಕೊರೊನಾ ಭೀತಿಯಿಂದಾಗಿ ಈ ಬಾರಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳಿಗೂ ಬೇಡಿಕೆಯಿಲ್ಲದಂತಾಗಿದೆ. ಹೀಗಾಗಿ ಒಂದು ಅಡಿಯಿಂದ ನಾಲ್ಕು ಅಡಿ ತನಕ ಮಾತ್ರ ಗಣೇಶನ ಮೂರ್ತಿಗಳನ್ನು ಸಿದ್ದಪಡಿಸಲಾಗುತ್ತಿದೆ.
ಪರಿಸರ ಸ್ನೇಹಿ ಗಣೇಶ, ಅಯೋಧ್ಯೆಯ ಶ್ರೀರಾಮ ಗಣೇಶ, ಮತ್ಸ್ಯ ಗಣೇಶ, ಕೊರೊನಾ ಗಣೇಶ, ಕುರುಕ್ಷೇತ್ರ ಗಣೇಶ, ಅಂಬೇಡ್ಕರ್ ಗಣೇಶ ಹೀಗೆ ವಿಧ-ವಿಧವಾದ ಗಣೇಶ ಮೂರ್ತಿಗಳನ್ನು ತಯಾರು ಮಾಡಿದ್ರೂ ಕೂಡ, ಗ್ರಾಹಕರು ಬಾರದೇ ಇರುವುದು ಮಾರಾಟಗಾರರನ್ನು ಚಿಂತೆಗೀಡು ಮಾಡಿದೆ.