ಚಿತ್ರದುರ್ಗ: ಟಿವಿ ರಿಮೋಟ್ಗಾಗಿ ಇಬ್ಬರು ಮಕ್ಕಳು ಗಲಾಟೆ ಮಾಡಿದ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದ ತಂದೆ ಕತ್ತರಿ ಎಸೆದಿದ್ದರಿಂದ ಹಿರಿಯ ಮಗ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾನೆ. ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದ ಈ ಘಟನೆ ನಡೆದಿದೆ. ಚಂದ್ರಶೇಖರ್ (16) ಮೃತ ಬಾಲಕ. ಲಕ್ಷ್ಮಣಬಾಬು ಕತ್ತರಿ ಎಸೆದ ತಂದೆ ಎಂದು ತಿಳಿದುಬಂದಿದೆ. ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ತಂದೆ ಲಕ್ಷ್ಮಣಬಾಬು ವಿರುದ್ಧ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಟಿವಿ ರಿಮೋಟ್ಗಾಗಿ ಮಕ್ಕಳು ಜಗಳವಾಡಿದ್ದಕ್ಕೆ ಕೋಪಗೊಂಡ ತಂದೆ: ಮನೆಯಲ್ಲಿ ಲಕ್ಷ್ಮಣಬಾಬು ಅವರ ಇಬ್ಬರು ಅಪ್ರಾಪ್ತ ಮಕ್ಕಳು ಟಿವಿ ರಿಮೋಟ್ಗಾಗಿ ಗಲಾಟೆ ಮಾಡುತ್ತಿದ್ದರು. ಈ ವೇಳೆ ಮನೆಯಲ್ಲಿದ್ದ ತಂದೆ ಲಕ್ಷ್ಮಣಬಾಬು ಅವರು ಮಕ್ಕಳ ಗಲಾಟೆ ನೋಡಿ ಸಿಟ್ಟಿಗೆದ್ದು, ಹಿರಿಯ ಮಗನ ಮೇಲೆ ಕತ್ತರಿ ಎಸೆದಿದ್ದರು. ಇದರಿಂದಾಗಿ ಬಾಲಕನ ಕಿವಿಗೆ ಕತ್ತರಿ ತಗುಲಿ ತೀವ್ರ ರಕ್ತ ಸ್ರಾವವಾಗಿ ಮೃತಪಟ್ಟಿದ್ದಾನೆ. ಲಕ್ಷ್ಮಣಬಾಬು ಪಾರ್ಶ್ವವಾಯು ಪೀಡಿತರಾಗಿದ್ದು, ಮನೆಯಲ್ಲೇ ಇರುತ್ತಿದ್ದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ವಿಜಯನಗರ: ಮಗಳ ಕೊಲೆ ಮಾಡಿ ತಾಯಿ ಆತ್ಮಹತ್ಯೆ, ಮಗ ಆಸ್ಪತ್ರೆಗೆ ದಾಖಲು