ಚಿತ್ರದುರ್ಗ: ಕೋಟೆನಾಡಿನ ವ್ಯಕ್ತಿಯೋರ್ವ ಕೋವಿಡ್ ಲಸಿಕೆ ಪರೀಕ್ಷೆಗೆ ಒಳಪಟ್ಟಿದ್ದು, ಜಿಲ್ಲೆಯ ಜನರಿಗೆ ಧೈರ್ಯ ತುಂಬುವ ಪ್ರಯತ್ನ ಮಾಡಿದ್ದಾರೆ.
ಜಿಲ್ಲೆಯ ಹಿರಿಯೂರು ಪಟ್ಟಣದ ಕಾದಂಬರಿಕಾರ ಡಿ.ಸಿ.ಪಾಣಿ ಎಂಬುವವರು ವ್ಯಾಕ್ಸಿನ್ ಪರೀಕ್ಷೆಗೆ ಒಳಗಾಗಿದ್ದಾರೆ. ಬೆಳಗಾವಿಯ ಜೀವನ್ ರೇಖಾ ಆಸ್ಪತ್ರೆಯಲ್ಲಿ ಮೊದಲನೇ ಹಂತದ ಪ್ರಾಯೋಗಿಕ ಲಸಿಕೆಯನ್ನು ಪಡೆದಿರುವ ಪಾಣಿಯವರು, ಸ್ವಯಂಪ್ರೇರಿತರಾಗಿ ಪರೀಕ್ಷೆಗೆ ಒಳಗಾಗಿದ್ದಾರೆ. ಇವರಿಗೆ ಡಾ.ಪಾರಿತೋಷ್ ವಿ .ದೇಸಾಯಿ ವಿಶೇಷ ಫಾರ್ಮ್ಜೆಟ್ ಮೆಷಿನ್ ಮೂಲಕ ಪ್ರಾಯೋಗಿಕ ಲಸಿಕೆಯನ್ನು ನೀಡಿದ್ದಾರೆ. ಕೊರೊನಾ ಮಹಾಮಾರಿ ಶೀಘ್ರದಲ್ಲೇ ಅಂತ್ಯವಾಗಲಿ ಎಂಬ ಸದುದ್ದೇಶದಿಂದ ನಾನು ಈ ಪ್ರಯೋಗಕ್ಕೆ ಒಳಗಾಗಿದ್ದೇನೆ ಎಂದು ಪಾಣಿ ತಿಳಿಸಿದ್ದಾರೆ.
ಪಾಣಿಯವರು ಕೊರೊನಾ ಲಸಿಕೆಯ ಪರೀಕ್ಷೆಗೆ ಒಳಪಟ್ಟು ಬಂದಿರೋದಕ್ಕೆ ಇಡೀ ಕುಟುಂಬವೇ ಸಂತಸ ವ್ಯಕ್ತಪಡಿಸಿದೆ. ಮೊದಲು ನಮ್ಮ ತಂದೆ ಲಸಿಕೆಯ ಪರೀಕ್ಷೆಗೆ ಒಳಪಡುತ್ತಾರೆ ಎಂದಾಗ ದುಃಖವಾಯಿತು. ಜೊತೆಗೆ ಮನೆಯಲ್ಲಿ ಚಿಕ್ಕ ಮಗುವಿದೆ, ಹಾಗಾಗಿ ಬೇಡ ಎಂದು ಹೇಳಿದ್ದೆವು. ಆದರೆ, ಇಂದು ಅವರು ಟೆಸ್ಟ್ನಲ್ಲಿ ಯಾವುದೇ ತೊಂದರೆಯನ್ನು ಅನುಭವಿಸದೆ ನಮ್ಮ ಮುಂದೆ ಬಂದಿರೋದು ಬಹಳ ಸಂತೋಷವಾಗಿದೆ ಎಂದು ಮಗಳು ಹೇಳಿದ್ದಾರೆ.