ಚಿತ್ರದುರ್ಗ: ಕೊರೊನಾ ಎಫೆಕ್ಟ್ನಿಂದ ನಗರದಲ್ಲಿ ಬೀದಿಬದಿ ಗುಡಿಸಲು ಹಾಕಿಕೊಂಡು ಪ್ಲಾಸ್ಟಿಕ್ ಹಗ್ಗದ ವ್ಯಾಪಾರ ಮಾಡುತ್ತಿದ್ದ ಅಲೆಮಾರಿಗಳ ಜೀವನ ಅಯೋಮಯವಾಗಿದೆ.
ಹೌದು, ಒಂದೊತ್ತಿನ ಕೂಳಿಗಾಗಿ ಅಲೆದಾಡುವ ಅಲೆಮಾರಿಗಳಿಗೆ ಅಧಿಕಾರಿಗಳು ಕೋವಿಡ್ ಕೇರ್ ಸೆಂಟರ್ನ ಸಬೂಬು ಹೇಳಿ ಒಕ್ಕಲೆಬ್ಬಿಸಿದ್ದು, ದಾರಿ ಕಾಣದೆ ಅಲೆಮಾರಿಗಳು ಬೀದಿಗೆ ಬಿದ್ದಿದ್ದಾರೆ. ತುತ್ತಿನ ಚೀಲ ತುಂಬಿಕೊಳ್ಳಲು ಅವರ ತಾಯ್ನಾಡನ್ನೇ ಬಿಟ್ಟು ಬಂದು ಎರಡು ವರ್ಷಗಳಿಂದ ನಗರದಲ್ಲಿ ಇವರು ನೆಲೆ ಕಂಡುಕೊಂಡಿದ್ರು. ಆದ್ರೆ ಕೊರೊನಾ ಎಂಬ ಮಹಾಮಾರಿ ನೆಪದಲ್ಲಿ ನಗರಸಭೆ ಅಧಿಕಾರಿಗಳು ಅವರನ್ನು ಬೀದಿಪಾಲು ಮಾಡಿದ್ದಾರೆ ಎನ್ನಲಾಗಿದೆ.
ಈ ಅಲೆಮಾರಿಗಳು ಮೂಲತಃ ಉತ್ತರ ಪ್ರದೇಶದ ಮೂಲದವರಾಗಿದ್ದು, ಇವರು ವಾಸವಾಗಿರುವ ಖಾಲಿ ನಿವೇಶನದಿಂದ ಕೂಗಳತೆ ದೂರದಲ್ಲೇ ಕೋವಿಡ್ ಕೇರ್ ಸೆಂಟರ್ ಇದೆ. ಇದನ್ನೇ ನೆಪ ಮಾಡಿಕೊಂಡಿದ್ದ ನಗರಸಭೆ ಅಧಿಕಾರಿಗಳು ಅಲೆಮಾರಿಗಳನ್ನು ಅಲ್ಲಿಂದ ಖಾಲಿ ಮಾಡುವಂತೆ ಸೂಚಿಸಿದ್ದಾರೆ. ಹೀಗಾಗಿ ಅಲ್ಲಿಂದ ಹೊರಟ ಅಲೆಮಾರಿಗಳು ನಗರದ ಹೊರವಲಯದ ಗ್ರಾಮವೊಂದರ ಬಳಿಗೆ ತೆರಳಿದ್ರು. ಆದ್ರೆ ಅಲ್ಲಿಯೂ ಸಹ ಇವರಿಗೆ ವಾಸಿಸಲು ಜನರು ಬಿಡದೇ ಒಕ್ಕಲೆಬ್ಬಿಸಿದ್ದಾರೆ ಎನ್ನಲಾಗಿದೆ.