ಚಿತ್ರದುರ್ಗ: ಅತಿವೃಷ್ಠಿಯಿಂದಾಗಿ ಬೆಳೆದ ತೆಂಗಿನ ಮರಗಳು ನೆಲಕ್ಕುರಳಿ ರೈತ ನಷ್ಟಕ್ಕೀಡಾಗಿದ್ದಾನೆ. ಹೀಗಾಗಿ ನಷ್ಟ ಭರಿಸುವಂತೆ ಆಗ್ರಹಿಸಿ ರೈತ ಕುಟುಂಬ ಸಮೇತವಾಗಿ ಡಿಸಿ ಕಚೇರಿ ಎದುರು ವಿಷ ಹಿಡಿದು ಧರಣಿ ಮಾಡಿರುವ ಘಟನೆ ನಡೆದಿದೆ.
ರೈತ ಚಿಕ್ಕಣ್ಣ ಹಾಗೂ ಕುಟುಂಬದವರು ಪರಿಹಾರಕ್ಕಾಗಿ ಆಗ್ರಹಿಸಿ ಡಿಸಿ ವಿನೋತ್ ಪ್ರಿಯಾ ಎದುರು ವಿಷ ಇಟ್ಟು ಅಳಲು ತೋಡಿಕೊಂಡರು. ನೆರೆಹಾವಳಿಯಿಂದಾಗಿ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಕೆಲ್ಲೋಡು ಗ್ರಾಮದ ರೈತ ಚಿಕ್ಕಣ್ಣನವರಿಗೆ ಸೇರಿದ್ದ ಎರಡು ಎಕರೆ ತೆಂಗಿನ ತೋಟದಲ್ಲಿದ್ದ 50 ತೆಂಗಿನ ಮರಗಳು ನೆಲಕ್ಕುರುಳಿದ್ದವು. ತೋಟ ನಾಶವಾಗುವುದರ ಜೊತೆಗೆ ರೈತ ಚಿಕ್ಕಣ್ಣನಿಗೆ ಸುಮಾರು 15 ಲಕ್ಷ ಮೌಲ್ಯದ ಬೆಳೆ ನಷ್ಟವಾಗಿದೆ.
ಆದರೆ, ಬೆಳೆನಷ್ಟವಾಗಿ ಎರಡು ತಿಂಗಳೇ ಕಳೆದರೂ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ರೈತ ಚಿಕಣ್ಣ ಆಕ್ರೋಶ ವ್ಯಕ್ತಪಡಿಸಿದರು. ಸೂಕ್ತ ಪರಿಹಾರ ಕಲ್ಪಸುವಂತೆ ಚಿಕ್ಕಣ್ಣ ಇಂದು ವಿಷದ ಬಾಟಲ್ ಸಮೇತ ಡಿಸಿ ಕಚೇರಿಗೆ ತಲುಪಿ ಪ್ರತಿಭಟನೆ ನಡೆಸಿದರು.
ಈ ಬಗ್ಗೆ ಪ್ರತಿಕ್ರಯಿಸಿದ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ, ಈ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ಪರಿಹಾರ ಕೊಡಿಸುವ ಭರವಸೆ ನೀಡಿದರು.