ಚಿತ್ರದುರ್ಗ: ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿದ್ದು, ಸೋಂಕು ವೇಗವಾಗಿ ಒಬ್ಬರಿಂದ ಒಬ್ಬರಿಗೆ ಹರಡುತ್ತಿದೆ. ಆದ್ದರಿಂದ ಸರ್ಕಾರದ ಆದೇಶದ ಜೊತೆಯಲ್ಲಿ ಹೆಚ್ಚುವರಿಯಾಗಿ ಜಿಲ್ಲೆಯಲ್ಲಿ ಇಂದಿನಿಂದ ಮೇ 24ರ ಬೆಳಗ್ಗೆ 6 ಗಂಟೆಯವರೆಗೆ ವಾರಾಂತ್ಯ ಲಾಕ್ಡೌನ್ ಜಾರಿಗೊಳಿಸಿ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಆದೇಶಿಸಿದ್ದಾರೆ.
ಅಗತ್ಯ ಸೇವೆಗಳಾದ ವೈದ್ಯಕೀಯ ತುರ್ತು ಸೇವೆಗಳು, ತುರ್ತು ಸೇವೆ ಒದಗಿಸುವ ಇಲಾಖೆಗಳು, ಔಷಧಿ ಅಂಗಡಿಗಳು, ಎಲ್ಲಾ ಆಸ್ಪತ್ರೆ, ಪೆಟ್ರೋಲ್ ಪಂಪ್‍ಗಳು, ಹಾಲಿನ ಬೂತ್‍ಗಳಿಗೆ ಬೆಳಗ್ಗೆ 6ರಿಂದ 10ರವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಸರ್ಕಾರಿ ವಾಹನಗಳ ಓಡಾಟ, ಅಗತ್ಯ ಸೇವೆಗಳ ಇಲಾಖೆಯ ಸಿಬ್ಬಂದಿ ಓಡಾಟ, ಈಗಾಗಲೇ ಅನುಮತಿ ನೀಡಿರುವ ಕಾರ್ಯಕ್ರಮಗಳು, ದಿನಪತ್ರಿಕೆ ವಿತರಣೆ, ಎಲ್ಲಾ ರೀತಿಯ ಸರಕು ಸಾಗಣೆ ವಾಹನಗಳು, ಆಮ್ಲಜನಕ ಸೇವೆಗಳು, ಇ-ಕಾಮರ್ಸ್ ಸೇವೆಗಳು, ಹೋಟೆಲ್‍ಗಳಲ್ಲಿ ತಿಂಡಿ, ಊಟ ಪಾರ್ಸೆಲ್ ಪಡೆಯಲು, ತರಕಾರಿಗಳನ್ನು ಮನೆ ಬಾಗಿಲಿಗೆ ತಲುಪಿಸುವ ಸೇವೆಗಳನ್ನು ಹೊರತುಪಡಿಸಿ ಇತರೆ ಎಲ್ಲಾ ಚಟುವಟಿಕೆಗಳನ್ನು ನಿರ್ಬಂಧಿಸಿ ಆದೇಶಿಸಲಾಗಿದೆ.