ಚಿತ್ರದುರ್ಗ: ಐಎಂಎ ಕಂಪನಿಯ ವಂಚನೆಯ ಜಾಲ ರಾಜ್ಯಾದ್ಯಂತ ಹಬ್ಬಿದ್ದು, ಇದೀಗ ಕೋಟೆನಾಡು ಚಿತ್ರದುರ್ಗದಲ್ಲೂ ಮೋಸ ಹೋದವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಪ್ರತಿ ತಿಂಗಳು ಹೆಚ್ಚಿನ ಬಡ್ಡಿ ಸಿಗುತ್ತದೆ ಎಂಬ ಆಸೆಯಿಂದ 200ಕ್ಕೂ ಹೆಚ್ಚು ಜನರು ಹಣ ತೊಡಗಿಸಿದ್ದು, ಈಗ ಹಣ ಬರುವುದಿಲ್ಲ ಅಂತಾ ತಿಳಿದು ಎಸ್ಪಿ ಕಚೇರಿ ಮುಂದೆ ಗೋಳಿಡುತ್ತಿದ್ದಾರೆ.
ಐಎಂಎ ಸಂಸ್ಥೆಯ ಬಹುಕೋಟಿ ವಂಚನೆ ಪ್ರಕರಣ ದಿನೇ ದಿನೇ ಹಲವು ತಿರುವು ಪಡೆದುಕೊಳ್ಳುತ್ತಿದೆ. ಐಎಂಎ ವಿರುದ್ಧ ಈಗಾಗಲೇ ಸಾವಿರಾರು ದೂರುಗಳು ದಾಖಲಾಗಿದ್ದು, ಈ ಮೋಸ ಜಾಲಕ್ಕೆ ಕೋಟೆನಾಡಿನ ಜನ್ರು ಕೂಡ ಬಲಿಯಾಗಿದ್ದಾರೆ. 200ಕ್ಕೂ ಹೆಚ್ಚು ಜನರು ಎಸ್ಪಿ ಕಚೇರಿಗೆ ದೌಡಾಯಿಸಿ ಪ್ರಕರಣ ದಾಖಲಿಸಿದ್ದಾರೆ.
ಮೊಹಮದ್ ನೂರುಲ್ಲಾ ಎಂಬುವರು ಕೂಡ ಇದೇ ಕಂಪನಿಯಲ್ಲೇ ಕೆಲಸ ಮಾಡಿಕೊಂಡು ಐಎಂಎನಲ್ಲಿ ದುಡ್ಡನ್ನ ಹೂಡಿಕೆ ಮಾಡಿ ಮೋಸ ಹೋಗಿರುವುದಾಗಿ ಅಳಲು ತೋಡಿಕೊಂಡಿದ್ದಾರೆ.
ಐಎಂಎ ನಲ್ಲಿ ಹಣ ತೊಡಗಿಸಿದ ಜನರಿಗೆ ಮೊದಲು ಮಾಸಿಕವಾಗಿ 2500 ರೂಪಾಯಿ ಬಡ್ಡಿ ನೀಡುತ್ತಿದ್ದ ಸಂಸ್ಥೆ ಕ್ರಮೇಣವಾಗಿ ಕಡಿಮೆ ಮಾಡುತ್ತಾ ಬಂದಿತ್ತು. ಕಳೆದ ಮೂರು ತಿಂಗಳಿನಿಂದ ಹಣ ಬರುವುದೇ ನಿಂತಿತ್ತು. ಹೀಗಾಗಿ ಸಂಸ್ಥೆ ಬಗ್ಗೆ ವಿಚಾರಿಸಿದಾಗ, ಬೀಗ ಜಡಿದು ನಾಪತ್ತೆಯಾಗಿರುವುದು ಗೊತ್ತಾಗಿದೆ. ಇದರಿಂದ ಆತಂಕಕ್ಕೊಳಗಾಗಿರುವ ಹೂಡಿಕೆದಾರರು, ಚಿತ್ರದುರ್ಗ ಎಸ್ಪಿ ಕಚೇರಿಗೆ ಭೇಟಿ ನೀಡಿ 200ಕ್ಕೂ ಹೆಚ್ಚು ಪ್ರತ್ಯೇಕ ದೂರು ನೀಡಿದ್ದಾರೆ. ಅಲ್ಲದೆ ತಮ್ಮ ಹಣ ವಾಪಸ್ ಕೊಡಿಸಿ ಎಂದು ಮನವಿ ಮಾಡ್ತಿದಾರೆ.
ಒಟ್ಟಾರೆ ಐಎಂಎ ಮಾಲೀಕನ ನಂಬಿ ನೋಡಿ ಅದೆಷ್ಟೊ ಜನ ಹಣ ಹೂಡಿಕೆ ಮಾಡಿ ಮೋಸಹೋಗಿದ್ದಾರೆ. ವಂಚಕ ಮೊಹಮದ್ ಮನ್ಸೂರ್ ಖಾನ್ ಸರಿಯಾದ ಶಿಕ್ಷೆಯಾಗಿ ತಮ್ಮ ಹಣ ವಾಪಸ್ ಬರಲಿ ಅನ್ನೋದು ಬಡ ಜನರ ಕೂಗಾಗಿದೆ.