ಚಿತ್ರದುರ್ಗ : ಕೋವಿಡ್-19 ಸೋಂಕು ಹರಡದಂತೆ ತಡೆಯಲು ಜಿಲ್ಲೆಯಲ್ಲಿ ಜಾರಿಗೊಳಿಸಲಾಗಿರುವ ಕರ್ಫ್ಯೂ ಆದೇಶ ಉಲ್ಲಂಘಿಸಿರುವುದಕ್ಕೆ ಸಂಬಂಧಿಸಿದಂತೆ ಈವರೆಗೆ 30 ಜನರನ್ನು ಬಂಧಿಸಲಾಗಿದೆ. 16 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೆ ಕಾನೂನು ಉಲ್ಲಂಘಿಸಿದ್ದಕ್ಕಾಗಿ 21 ಎಫ್‍ಐಆರ್ ದಾಖಲಾಗಿದೆ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ತಿಳಿಸಿದರು.
ಕೊರೊನಾ ವೈರಸ್ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಏ. 14ರವರೆಗೆ ಲಾಕ್‍ಡೌನ್ ಜಾರಿಯಲ್ಲಿರುತ್ತೆ. ಸಾರ್ವಜನಿಕರು ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕೊರೊನಾ ವೈರಸ್ ಹರಡದಂತೆ ಮಾಡಲು ಎಲ್ಲಾ ಸಾರ್ವಜನಿಕರು ಮನೆಗಳಲ್ಲಿಯೇ ಇರಬೇಕು. ಅನಗತ್ಯ ಹೊರಗಡೆ ಅಡ್ಡಾಡುವುದು, ವಾಹನಗಳಲ್ಲಿ ತಿರುಗಾಡುವುದು ಮಾಡುವಂತಿಲ್ಲ ಎಂಬ ಸೂಚನೆಯನ್ನು ನೀಡಿದ್ದರೂ ಕೂಡ ಜನ ಅಲ್ಲಲ್ಲಿ ಅನಗತ್ಯ ಓಡಾಟ, ಸುರಕ್ಷತಾ ವಿಧಾನ ಅನುಸರಿಸದೆ ಕಾನೂನು ಉಲ್ಲಂಘಿಸುವುದು ಕಂಡು ಬರುತ್ತಿದ್ದರಿಂದ ಈ ಕ್ರಮಕೈಗೊಳ್ಳಲಾಗಿದೆ ಎಂದರು.