ಚಿತ್ರದುರ್ಗ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಸೃಷ್ಟಿಯಾದ ಪರಿಣಾಮ ರೈತರ ಬೆಳೆಗಳು ನಾಶವಾಗಿವೆ. ರೈತರು ಸಂಕಷ್ಟದಲ್ಲಿ ಸಿಲುಕಿದ್ರೂ ಕೂಡ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ರೈತರ ನೆರವಿಗೆ ಧಾವಿಸಿಲ್ಲವೆಂದು ಆರೋಪಿಸಿ ಇಂದು ರೈತ ಮುಖಂಡರು ಭಿಕ್ಷೆ ಬೇಡಿ ಸಂಗ್ರಹಿಸಿದ ಹಣವನ್ನು ಕೇಂದ್ರ ಸರ್ಕಾರಕ್ಕೆ ರವಾನಿಸಿದ್ದಾರೆ.
ಪ್ರವಾಹಕ್ಕೆ ತುತ್ತಾಗಿ ಜನ ತಮ್ಮ ಮನೆ ಮಠ ಕಳೆದುಕೊಂಡ್ರೆ, ರೈತರು ಬೆಳೆಯನ್ನು ಕಳೆದುಕೊಂಡು ದಿಕ್ಕು ತೋಚದಂತಾಗಿದ್ದಾರೆ. ಇಷ್ಟೆಲ್ಲಾ ಸಮಸ್ಯೆ ಉದ್ಭವಿಸಿದ್ರೂ ಕೂಡ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ರೈತರ ನೆರವಿಗೆ ಧಾವಿಸದೆ ಇರುವುದು ಜಿಲ್ಲೆಯ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಹಾಗಾಗಿ ಜಿಲ್ಲೆಯ ರೈತರು ಬೀದಿಗಿಳಿದು ಭಿಕ್ಷೆ ಬೇಡಿ ಸುಮಾರು 4,720 ರೂ. ಹಣವನ್ನು ಸಂಗ್ರಹಿಸಿದ್ದಾರೆ. ಈ ಹಣವನ್ನು ಡಿಡಿ ಮೂಲಕ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಪರಿಹಾರ ನಿಧಿಗೆ ಹಾಕಿದ್ದಾರೆ.
ಜನಪ್ರತಿನಿಧಿಗಳು ಪ್ರವಾಹಕ್ಕೆ ತುತ್ತಾಗಿರುವ ರೈತರ ಧ್ವನಿಯಾಗಬೇಕು. ಬೆಳೆ ಕಳೆದುಕೊಂಡಿರುವ ರೈತರ ಕಣ್ಣೀರು ಒರೆಸಿ ಬೆಳೆ ಪರಿಹಾರ ಬಿಡುಗಡೆ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಸುರೇಶ್ ಬಾಬು ಸರ್ಕಾರಕ್ಕೆ ಒತ್ತಾಯಿಸಿದರು.
ಜಿಲ್ಲೆಯ ಪ್ರಮುಖ ಬೆಳೆಗಳಾದ ಮೆಕ್ಕೆಜೋಳ, ಶೇಂಗಾ, ಈರುಳ್ಳಿ ಬೆಳೆಗಳು ಅತಿವೃಷ್ಟಿಯಿಂದ ನೆಲಕಚ್ಚಿದ್ದು ರೈತರನ್ನು ಹೈರಾಣಾಗಿಸಿದೆ. ಶೇಂಗಾ ಬೆಳೆ ರೋಗಕ್ಕೆ ತುತ್ತಾಗಿದ್ದರಿಂದ 20 ಕ್ವಿಂಟಲ್ ಬರುವ ಫಸಲು ಕೇವಲ ಒಂದು ಒಂದೂವರೆ ಕ್ವಿಂಟಲ್ ಬರುತ್ತಿರುವುದು ರೈತರನ್ನು ಚಿಂತೆಗೀಡುಮಾಡಿದೆ. ಸ್ವಲ್ಪ ಮಟ್ಟಿಗೆ ದೊರೆತ ಫಸಲನ್ನು ಮಾರಾಟಕ್ಕೆ ಮಾರುಕಟ್ಟೆಗೆ ತೆಗೆದುಕೊಂಡು ಹೋದ್ರೆ ಸರಿಯಾದ ಬೆಲೆ ಕೂಡ ಸಿಗುತ್ತಿಲ್ಲ ಎಂದು ರೈತರು ಆರೋಪಿಸಿದ್ದಾರೆ.
ದಿವಾಳಿ ಆಗಿರುವ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ರೈತರ ನೆರವಿಗೆ ಆಗಮಿಸದೆ ಇರುವುದು ನಾಚಿಗೇಡಿತನವಾಗಿದೆ ಎಂದು ರೈತರು ಆಕ್ರೋಶ ಹೊರಹಾಕಿದರು.